ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಅವರನ್ನು ಇಳಿಸಿ ಎಂದು ಯಾರು ಕೇಳುತ್ತಿಲ್ಲ. ಹೈಕಮಾಂಡ್ ನೇರವಾಗಿ ಹೇಳದೇ ಇರಬಹುದು. ಆದರೆ, ಸದ್ಯಕ್ಕೆ ನಾಯಕತ್ವದಲ್ಲಿ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟವಾಗಿ ಸಿಗ್ನಲ್ ಕೊಟ್ಟಿದೆ. ಆದ್ದರಿಂದ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಅಂತಾ ನಾನು ನಂಬುತ್ತೇನೆ ಎಂದರು.
ಮೈಸೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಐದು ವರ್ಷ ಸಿಎಂ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಸಿಎಂ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಯಾವುದೇ ಚರ್ಚೆ ಆಗುತ್ತಿಲ್ಲ. ಕೇವಲ ಮಾಧ್ಯಮದಲ್ಲಿ ಮಾತ್ರ ಈ ವಿಷಯ ಚರ್ಚೆ ಆಗುತ್ತಿದೆ. ಸಿಎಂ ಬದಲಾವಣೆ ವಿಷಯ ಈಗಾಗಲೇ ಸೆಟಲ್ ಆಗಿದೆ. ಸಿಎಂ ಅವರನ್ನು ಕೆಳಗೆ ಇಳಿಸಿ ಎಂದು ಯಾರೂ ಹೇಳಿಲ್ಲ. ಜೊತೆಗೆ ಕೆಲವರ ಬೇಡಿಕೆಗೂ ಹೈಕಮಾಂಡ್ ಕೂಡ ಯಾವುದೇ ಮನ್ನಣೆ ಕೊಟ್ಟಿಲ್ಲ ಎಂದು ತಿಳಿಸಿದರು.
ಮುಡಾ ಹಗರಣದಲ್ಲಿ ಕೋರ್ಟ್ ಬಿ ರಿಪೋರ್ಟ್ ಪುರಸ್ಕಾರ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯಂತೀಂದ್ರ ಸಿದ್ದರಾಮಯ್ಯ, ನಮಗೆ ಕಾನೂನಿನಲ್ಲಿ ನಂಬಿಕೆ ಇತ್ತು, ನಾವೇನು ತಪ್ಪು ಮಾಡಿರಲಿಲ್ಲ. ಕೋರ್ಟ್ ತೀರ್ಪನ್ನು ಸ್ವಾಗತ ಮಾಡುತ್ತೇವೆ. ಕೋರ್ಟ್ ತೀರ್ಪಿನಿಂದ ನಮ್ಮ ತಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ. ದೂರುದಾರ ಸ್ನೇಹಮಹಿ ಕೃಷ್ಣ ಅವರು ಹೋರಾಟ ಮಾಡಲಿ. ಕಾನೂನು ಎಲ್ಲರಿಗೂ ಒಂದೇ ಎಂದರು.
ಸಚಿವ ಜಾರ್ಜ್ ಇಲಾಖೆಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪ ವಿಚಾರ ನನಗೆ ಗೊತ್ತಿಲ್ಲ, ಖುದ್ದು ಸಚಿವ ಜಾರ್ಜ್ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸುಮ್ಮನೆ ನನ್ನ ಹೆಸರನ್ನು ಬಿಜೆಪಿ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಸದನದಲ್ಲಿ ಕೂಡ ಬಿಜೆಪಿ ನನ್ನ ಹೆಸರನ್ನ ಹೇಳಿದೆ. ಹಿಂದೆಯಿಂದಲೂ ನನ್ನನ್ನ ಬಿಜೆಪಿಯವರು ಗುರಿಯಾಗಿಸಿಕೊಂಡಿದ್ದಾರೆ. ಮನರೇಗಾ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ನಾವು ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಲ್ಲಿ ಸಾಗುತ್ತಿದ್ದೇವೆ. ಆದರೆ ಬಿಜೆಪಿ ಅವರಿಗೆ ಜನರ ಕೆಲಸ ಬೇಕಿಲ್ಲ, ಗಾಂಧೀಜಿ ಅವರ ಹೆಸರು ಬೇಕಿಲ್ಲ, ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ನಾನು ಕೂಡ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ಮಾಡೋದನ್ನು ಸ್ವಾಗತಿಸುತ್ತೇನೆ. ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಇವಿಎಂ ಮಿಷನ್ ರದ್ದು ಮಾಡಿ ಬ್ಯಾಲೆಟ್ ಪೇಪರ್ ಬಳಸುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳೇ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.



