ಸೌಜನ್ಯ ಕೊಲೆ ಪ್ರಕರಣದಲ್ಲಿ ಅಗತ್ಯ ಬಿದ್ದರೆ ಎಸ್ ಐಟಿ ರಚನೆ ಮಾಡುತ್ತೇವೆ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಕೊಲೆ ಪ್ರಕರಣದ ಕುರಿತು ಯಾರೋ ಏನೋ ಹೇಳಿದರು ಅಂತ ನಾವು ಎಸ್ ಐಟಿ ರಚನೆ ಮಾಡಲು ಆಗಲ್ಲ. ಪೊಲೀಸರು ಇನ್ನೆರಡು ದಿನದಲ್ಲಿ ವರದಿ ನೀಡಲಿದ್ದಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸೌಜನ್ಯ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಈಗ ನ್ಯಾಯಾಲಯದಲ್ಲಿ ಹೆಣಗಳನ್ನು ಅಕ್ರಮವಾಗಿ ಹೂತು ಹಾಕಿದ್ದು ನಾನೆ. ಆ ಹೆಣಗಳನ್ನು ಹೂತಿರುವ ಜಾಗ ತೋರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಅವರ ಹೇಳಿಕೆ ಆಧರಿಸಿ ಪೊಲೀಸರು ವರದಿ ನೀಡಿದ ನಂತರ ಪರಿಶೀಲಿಸಿ ಎಸ್ ಐಟಿ ರಚನೆ ಮಾಡುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಸೌಜನ್ಯ ಕೊಲೆ ಪ್ರಕರಣದಲ್ಲಿ ಎಸ್ ಐಟಿ ರಚನೆ ಮಾಡಬೇಕು ಎಂದು ಗೋಪಾಲಗೌಡರು ಅಥವಾ ಯಾರೋ ಹೇಳಿದಂತೆ ತನಿಖೆ ನಡೆಸಲು ಆಗಲ್ಲ. ಹಾಗಂತ ನಾವು ಯಾವುದೇ ಪ್ರಭಾವ ವ್ಯಕ್ತಿಗಳ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಳ್ಳುವುದಿಲ್ಲ. ಕಾನೂನು ಹೇಳಿದಂತೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ನಾಳೆ ಮೈಸೂರಿನಲ್ಲಿ ನಡೆಯುತ್ತಿರುವ ಸಮಾವೇಶ, ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಕೆಲಸವನ್ನು ಜನರ ಮುಂದಿಡುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ನಾಳೆ ನಡೆಯಲಿರುವ ಸಮಾವೇಶದ ಬಗ್ಗೆ ಬಿಜೆಪಿಯವರು ಟೀಕೆ ವ್ಯಕ್ತಪಡಿಸುತ್ತಿರುವ ಬಗ್ಗೆ ಉತ್ತರಿಸಿ, ನಾಳೆ ಸುಮಾರು 2600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದ್ದು, ಬಿಜೆಪಿಯವರು ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಗರಪ್ರದೇಶದ ಮತದಾರರಲ್ಲಿ ಕಾಂಗ್ರೆಸ್ ಪರವಾದ ಒಲವು ಕಡಿಮೆ ಆಗುತ್ತಿದೆಯಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಮೈಸೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ನಾಳಿನ ಕಾರ್ಯಕ್ರಮ ಯಾರದೇ ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ. ಅದು ಅಭಿವೃದ್ಧಿಯ ಕಾರ್ಯಕ್ರಮ ಎಂದರು.



