Tuesday, May 26, 2026
Google search engine
Homeರಾಜ್ಯಕಳಪೆ ನಿರ್ವಹಣೆಗೆ ಪಿಲಿಕುಳದಲ್ಲಿ 4 ವರ್ಷದಲ್ಲಿ 150ಕ್ಕೂ ಅಧಿಕ ಕಾಡುಪ್ರಾಣಿಗಳ ಅಸಹಜ ಸಾವು

ಕಳಪೆ ನಿರ್ವಹಣೆಗೆ ಪಿಲಿಕುಳದಲ್ಲಿ 4 ವರ್ಷದಲ್ಲಿ 150ಕ್ಕೂ ಅಧಿಕ ಕಾಡುಪ್ರಾಣಿಗಳ ಅಸಹಜ ಸಾವು

ಮೃಗಾಲಯ ಅಸಹಜ ನಿರ್ವಹಣೆಯಿಂದಾಗಿ ದಕ್ಷಿಣ ಕನ್ನಡದ ಖ್ಯಾತ ಪಿಲಿಕುಳ ಮೃಗಾಲಯದಲ್ಲಿ ಕಳೆದ 4 ವರ್ಷಗಳಲ್ಲಿ 150ಕ್ಕೂ ಅಧಿಕ ವನ್ಯಜೀವಿಗಳು ಮೃತಪಟ್ಟಿರುವ ಆಘಾತಕಾರ ವಿಷಯ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡದ ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವುಗಳು ಇದೀಗ ಗಂಭೀರ ಅನುಮಾನಗಳಿಗೆ ಕಾರಣವಾಗಿವೆ. ವನ್ಯಜೀವಿಗಳ ಅಸಹಜ ಸಾವಿಗೆ ವಿಷಪೂರಿತ ಆಹಾರವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ನಾಡಿನ ಜನತೆ ಬೆಚ್ಚಿಬಿದ್ದಿದ್ದಾರೆ.

ಇತ್ತೀಚೆಗೆ ಸಾವನ್ನಪ್ಪಿದ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಬೆಳಗಾವಿಯಲ್ಲಿ ಇತ್ತೀಚೆಗೆ ಸೋಂಕಿನ ಕಾರಣ 5 ಜಿಂಕೆಗಳು ಮೃತಪಟ್ಟ ಘಟನೆ ನಂತರ ಇದೀಗ ಮತ್ತೊಂದು ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವು ಪ್ರಾಣಿಪ್ರಿಯರಿಗೆ ಆಘಾತ ತಂದಿದೆ.

ಮೃಗಾಲಯದ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವೇ?

ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ಬಂದ ವರದಿ ಪ್ರಕಾರ, ಮೃಗಾಲಯದಲ್ಲಿ ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಬಳಸುವ ಅತಿಯಾದ ಕೀಟನಾಶಕ ಅವಶೇಷಗಳನ್ನು ಸರಿಯಾಗಿ ಶುಚಿಗೊಳಿಸದೇ ಪ್ರಾಣಿಗಳಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಈ ವಿಷಕಾರಿ ಅಂಶಗಳು ನಿಧಾನವಾಗಿ ದೇಹದಲ್ಲಿ ಸಂಗ್ರಹವಾಗಿ ‘ಸ್ಲೋ ಪಾಯಿಸನಿಂಗ್’ ಮೂಲಕ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಹುಲಿ, ಜಿಂಕೆ, ಸಾಂಬಾರ್, ಕಾಡುಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಮೃತಪಟ್ಟಿದ್ದು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಹೂಕೋಸು ಮತ್ತು ಎಲೆ ಕೋಸು ಬೆಳೆಯುವಾಗ ಅವುಗಳಿಗೆ ಯಾವುದೇ ರೋಗ ಬರಬಾರದೆಂಬ ಕಾರಣಕ್ಕೆ ಹೈಡೋ ಸೈನೇಡ್ ಮತ್ತು ನೈಟ್ರೇಟ್ ಮಾದರಿಗಳನ್ನು ಸಿಂಪಡಿಸಲಾಗುತ್ತದೆ. ಪ್ರಾಣಿಗಳಿಗೆ ಇವುಗಳನ್ನು ಆಹಾರವಾಗಿ ನೀಡುವ ಮೊದಲು ಸ್ವಚ್ಛಗೊಳಿಸುವುದು ಅಗತ್ಯ. ಆದರೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಕ್ಯಾಬೇಜ್, ಕಾಲಿಫ್ಲವರ್ ಎಲೆಗಳನ್ನು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಹಸಿಯಾಗಿಯೇ ನೀಡಲಾಗುತ್ತಿದ್ದು, ಇದನ್ನು ತಿಂದ ಪ್ರಾಣಿಗಳು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಲು ಕಾರಣ ಆಗುತ್ತಿದೆಯಾ ಎಂಬ ಶಂಕೆ ಮೂಡಿದೆ. ಪಿಲಿಕುಳದ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆ ಕ್ಯಾಬೇಜ್, ಕ್ಯಾಲಿಫ್ಲವರ್ ಎಲೆಗಳನ್ನು ಆಹಾರವನ್ನಾಗಿ ನೀಡುವುದಕ್ಕೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ.

ಮೃಗಾಲಯ ಮುಚ್ಚಲು ಆದೇಶಿಸಿದ್ದ ಹೈಕೋರ್ಟ್

ಕೆಲ ದಿನಗಳ ಹಿಂದೆ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ದಯನೀಯ ಸ್ಥಿತಿ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅಲ್ಲಿ ಪ್ರಾಣಿಗಳು ಅನುಭವಿಸುತ್ತಿದ್ದ ದುಸ್ಥಿತಿಯನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಾಣಿಗಳ ಫೋಟೋಗಳನ್ನು ಪರಿಶೀಲಿಸಿದ ಬಳಿಕ, ಮೃಗಾಲಯವನ್ನು ತಕ್ಷಣ ಮುಚ್ಚಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಎಚ್ಚರಿಕೆ ನೀಡಿತ್ತು. ಜಂಗು ಹಿಡಿದ ಪಿಂಜರಗಳು, ಅಸ್ವಚ್ಛ ಪರಿಸರ, ಸಮರ್ಪಕ ಸುರಕ್ಷತೆ ಮತ್ತು ಆರೈಕೆಯ ಕೊರತೆ ಬಗ್ಗೆ ನ್ಯಾಯಾಲಯ ಕಿಡಿಕಾರಿತ್ತು.

ಡಿಸೆಂಬರ್ 2025ರಲ್ಲಿ ಮೃಗಾಲಯದ ಪರವಾನಗಿ ಅವಧಿ ಮುಕ್ತಾಯಗೊಂಡಿದ್ದರೂ ನವೀಕರಣವಿಲ್ಲದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವನ್ನೂ ಕೋರ್ಟ್ ವ್ಯಕ್ತಪಡಿಸಿತ್ತು. ಆದರೂ ಇದೀಗ ಮೃತ ಜಿಂಕೆಯೊಂದರ ಮರಣೋತ್ತರ ಪರೀಕ್ಷೆಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments