ಸನ್ ರೈಸರ್ಸ್ ತಂಡದ ಆರಂಭಿಕ ಅಭಿಷೇಕ್ ಶರ್ಮ ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಸಿಡಿಸಿ ಐಪಿಎಲ್ ನಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 246 ರನ್ ಅನ್ನು 10 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಅಭಿಷೇಕ್ ಶರ್ಮ 141 ರನ್ ಸಿಡಿಸಿ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ಚೇಸಿಂಗ್ ವೇಳೆ ಅತೀ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಮತ್ತೊಂದು ದಾಖಲೆಗೆ ಪಾತ್ರರಾದರು.
ಅಭಿಷೇಕ್ ಎಸ್ ಆರ್ ಎಚ್ ಪರ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರು. ಇದಕ್ಕೂ ಮುನ್ನ ಡೇವಿಡ್ ವಾರ್ನರ್ 126 ರನ್ ಗಳಿಸಿದ್ದರು.
ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬೌಂಡರಿ-ಸಿಕ್ಸರ್ ಗಳ ಮೂಲಕ ರನ್ ಗಳಿಸಿದ ದಾಖಲೆಗೆ ಅಭಿಷೇಕ್ ಪಾತ್ರರಾದರು. ಅಭಿಷೇಕ್ ಬೌಂಡರಿ- ಸಿಕ್ಸರ್ ಗಳ ಮೂಲಕ 116 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಜಾನಿ ಬೇರ್ ಸ್ಟೋ 90 ರನ್ ಗಳಿಸಿದ್ದರು.
ಅಭಿಷೇಕ್ ಶರ್ಮ 10 ಸಿಕ್ಸರ್ ಸಿಡಿಸಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಡೇವಿಡ್ ವಾರ್ನರ್ 8 ಸಿಕ್ಸರ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಐಪಿಎಲ್ ಇತಿಹಾಸದಲ್ಲೇ 492 ರನ್ ಬಂದಿರುವುದು ಇದೇ ಮೊದಲು ಇದರಿಂದ ಹೈದರಾಬಾದ್ ನಲ್ಲಿ ಮಾತ್ರವಲ್ಲ ಐಪಿಎಲ್ ನಲ್ಲಿ ದಾಖಲಾದ ಅತೀ ಹೆಚ್ಚು ಮೊತ್ತದ ದಾಖಲೆಯಾಗಿದೆ. ಅಲ್ಲದೇ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತೀ ದೊಡ್ಡ ಮೊತ್ತವನ್ನು ಚೇಸ್ ಮಾಡಿದ ದಾಖಲೆಯನ್ನು ಸನ್ ರೈಸರ್ಸ್ ತಂಡ ಬರೆದಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಅತೀ ದೊಡ್ಡ ಮೊತ್ತ ಚೇಸ್ ಇದಾಗಿದ್ದು, ಇದಕ್ಕೂ ಮುನ್ನ ಇದೇ ತಂಡದ ವಿರುದ್ಧ 215 ರನ್ ಚೇಸ್ ಮಾಡಿದ್ದು ದಾಖಲೆಯಾಗಿತ್ತು.
ಮೊಹಮದ್ ಶಮಿ 75 ರನ್ ನೀಡಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಬಾಸಿಲ್ ಟಂಪಿ 70 ರನ್ ನೀಡಿದ್ದರು.