ಕ್ಯಾಂಟರ್ ಬರ್ರಿ: ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ ಸಿಡಿಸಿದ ದ್ವಿಶತಕದ ನೆರವಿನಿಂದ ಭಾರತ `ಎ’ ತಂಡ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಕರುಣ್ ನಾಯರ್ ಸಿಡಿಸಿದ ದ್ವಿಶತಕದ ನೆರವಿನಿಂದ ಭಾರತ ಎ ತಂಡ ಮೊದಲ ಇನಿಂಗ್ಸ್ ನಲ್ಲಿ 119 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 533 ರನ್ ಕಲೆ ಹಾಕಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ನಿವೃತ್ತಿ ನಂತರ ಮುಂಬರುವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಹೊಸ ತಂಡವನ್ನು ಕಟ್ಟಲು ಮುಂದಾಗಿರುವ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಬಿಸಿಸಿಐ ಆಟಗಾರರ ಪ್ರದರ್ಶನ ಆಧರಿಸಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯ ಆಟಗಾರರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಕ್ಯಾಂಟರ್ ಬರಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡದ ಪರ ಕರುಣ್ ನಾಯರ್ ದ್ವಿಶತಕ ಸಿಡಿಸಿ ಮಿಂಚಿದರು. ಈ ಮೂಲಕ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡದ ಬಾಗಿಲು ತಟ್ಟಿದ್ದಾರೆ.
ಮೊದಲ ದಿನದಾಟದಲ್ಲಿ ಕರುಣ್ ನಾಯರ್ 186 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನವಾದ ಶನಿವಾರ ಕರುಣ್ ದ್ವಿಶತಕ ಪೂರೈಸಿದರು. 281 ಎಸೆತಗಳಲ್ಲಿ 26 ಬೌಂಡರಿ ಮತ್ತು 1 ಸಿಕ್ಸರ್ ನೆರವಿನೊಂದಿಗೆ 204 ರನ್ ಬಾರಿಸಿ ಔಟಾದರು.
ಇದಕ್ಕೂ ಮುನ್ನ ಕರುಣ್ ನಾಯರ್ 3ನೇ ವಿಕೆಟ್ ಗೆ ಸರ್ಫರಾಜ್ ಖಾನ್ ಜೊತೆ 181 ರನ್ ಜೊತೆಯಾಟ ನಿಭಾಯಿಸಿದರು. ಸರ್ಫರಾಜ್ ಖಾನ್ 119 ಎಸೆತಗಳಲ್ಲಿ 13 ಬೌಂಡರಿಯೊಂದಿಗೆ 92 ರನ್ ಗಳಿಸಿ ಔಟಾಗಿ 8 ರನ್ ನಿಂದ ಶತಕ ವಂಚಿತರಾದರು.
ನಂತರ 4ನೇ ವಿಕೆಟ್ ಗೆ ಧ್ರುವ ಜುರೆಲ್ ಮತ್ತು ಕರುಣ್ ನಾಯರ್ 195 ರನ್ ಪೇರಿಸಿದರು. ಜುರೆಲ್ ಕೂಡ 120 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 94 ರನ್ ಬಾರಿಸಿದ್ದಾಗ ಔಟಾಗಿ 6 ರನ್ ಗಳಿಂದ ಶತಕ ತಪ್ಪಿಸಿಕೊಂಡರು.


