ತವರಿನ ಹುಲಿ ಎಂದೇ ಖ್ಯಾತರಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭದ್ರಕೋಟೆಯನ್ನು ಛಿದ್ರಗೊಳಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ಗಳಿಂದ ಸೋಲಿಸಿ ಚೆನ್ನೈ ನೆಲದಲ್ಲಿ ಮೊದಲ ಬಾರಿ ಗೆದ್ದ ದಾಖಲೆ ಬರೆದಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 19.5 ಓವರ್ ಗಳಲ್ಲಿ ಆಲೌಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಚೆನ್ನೈ ನೆಲದಲ್ಲಿ ಇದೇ ಮೊದಲ ಬಾರಿ ಗೆದ್ದು ಇತಿಹಾಸ ಬರೆದ ಸನ್ ರೈಸರ್ಸ್ ಹೈದರಾಬಾದ್ 9 ಪಂದ್ಯಗಳಿಂದ 3 ಜಯ ಹಾಗೂ 6 ಸೋಲಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಹಿಂದಿಕ್ಕಿ 8ನೇ ಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ 9 ಪಂದ್ಯ 2 ಜಯ ಹಾಗೂ 7 ಸೋಲಿನೊಂದಿಗೆ 4 ಅಂಕದೊಂದಿಗೆ ಕೊನೆಯ 10ನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಟೂರ್ನಿಯ ಪ್ಲೇಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ತವರಿನಲ್ಲಿ ಸತತ 7 ಪಂದ್ಯಗಳಲ್ಲಿ ಸೋಲುಂಡ ದಾಖಲೆ ಬರೆದಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದರೂ ಕಠಿಣ ಸವಾಲು ಇಲ್ಲದೇ ಇರುವ ಕಾರಣ ಸುಲಭ ಜಯ ದಾಖಲಿಸಿತು. ತಂಡದ ಪರ ಕಳೆದ ಪಂದ್ಯದಲ್ಲಿ ವಿವಾದಾತ್ಮಕವಾಗಿ ಔಟಾಗಿದ್ದ ಇಶಾನ್ ಕಿಶನ್ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 44 ರನ್ ಬಾರಿಸಿ ವೈಯಕ್ತಿಕ ಗರಿಷ್ಠ ರನ್ ಸಾಧನೆ ಮಾಡಿದರು.
ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದ ಶ್ರೀಲಂಕಾದ ಕಮಿಂಡು ಮೆಂಡಿಸ್ 1 ವಿಕೆಟ್ ಪಡೆದಿದ್ದೂ ಅಲ್ಲದೇ 22 ಎಸೆತಗಳಲ್ಲಿ 3 ಬೌಂಡರಿ ಸೇರಿದ ಅಜೇಯ 32 ರನ್ ಬಾರಿಸಿ ತಂಡ ಗೆಲುವಿನ ದಡ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ನಿತಿಶ್ ಕುಮಾರ್ ರೆಡ್ಡಿ ಅಜೇಯ 19 ರನ್ ಸಿಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯಮ ವೇಗಿ ಹರ್ಷಲ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಉತ್ತಮ ಮೊತ್ತ ದಾಖಲಿಸಿತು.
ಒಂದು ಹಂತದಲ್ಲಿ ಸಿಎಸ್ ಕೆ 74 ರನ್ ಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಈ ಹಂತದಲ್ಲಿ ಡೆವಾಲ್ಡ್ ಬ್ರೈವಿಸ್ (42), ದೀಪಕ್ ಹೂಡಾ (22) ತಂಡವನ್ನು ಆಧರಿಸಲು ಯತ್ನಿಸಿ ವಿಫಲರಾದರು.
ಹರ್ಷಲ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರೆ, ಪ್ಯಾಟ್ ಕಮಿನ್ಸ್ ಮತ್ತು ಜೈದೇವ್ ಉನದ್ಕತ್ ತಲಾ 2 ವಿಕೆಟ್ ಪಡೆದು ಮಿಂಚಿದರು.



