ಶತಕ ವಂಚಿತ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಹೋರಾಟದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಮಹತ್ವದ ಮುನ್ನಡೆ ಸಾಧಿಸಿದರೂ ಮುಂಬೈ ಎರಡನೇ ಇನಿಂಗ್ಸ್ ನಲ್ಲಿ ತಿರುಗೇಟು ನೀಡಿದೆ.
ಮುಂಬೈನಲ್ಲಿ ನಡೆಯುತ್ತಿರುವ 4ನೇ ಕ್ವಾರ್ಟರ್ ಫೈನಲ್ ಪಂದ್ಯದ ಎರಡನೇ ದಿನವಾದ ಶನಿವಾರ ಕರ್ನಾಟಕ ತಂಡ ನಾಟಕೀಯ ಕುಸಿತ ಕಂಡು 173 ರನ್ ಗೆ ಆಲೌಟಾಯಿತು. ಆದರೂ ಮೊದಲ ಇನಿಂಗ್ಸ್ ನಲ್ಲಿ 53 ರನ್ ಗಳ ಮಹತ್ವದ ಮುನ್ನಡೆ ಪಡೆಯಿತು.
ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿದ್ದು, ಒಟ್ಟಾರೆ 136 ರನ್ ಗಳ ಮುನ್ನಡೆ ಸಾಧಿಸಿದೆ.
ಮುಂಬೈ ಪರ ಅಕ್ಷ್ ಆನಂದ್ [ಅಜೇಯ 53] ಮತ್ತು ಮುಶೀರ್ ಖಾನ್ [ಅಜೇಯ 49] ಮೂರನೇ ವಿಕೆಟ್ ಗೆ 112 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ [36] ಮತ್ತು ಅಖಿಲ್ ಹರಿದ್ವಾರ್ [33] ಮೊದಲ ವಿಕೆಟ್ ಗೆ 77 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದ್ದೂ ಅಲ್ಲದೇ ಇನಿಂಗ್ಸ್ ಹಿನ್ನಡೆಯ ಲೆಕ್ಕ ಚುಕ್ತ ಮಾಡಿದರು.
ಇದಕ್ಕೂ ಮುನ್ನ 2 ವಿಕೆಟ್ ಗೆ 110 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ ತುಷಾರ್ ದೇಶಪಾಂಡೆ ಮತ್ತು ಮೋಹಿತ್ ಅವಸ್ತಿ ಮಾರಕ ದಾಳಿಗೆ ತತ್ತರಿಸಿತು.
ಒಂದು ಕಡೆ ಸತತವಾಗಿ ವಿಕೆಟ್ ಉರುಳುತ್ತಿದ್ದರೂ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಮುನ್ನಡೆಸಿದರು. ಮಯಾಂಕ್ 134 ಎಸೆತಗಳಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 92 ರನ್ ಗಳಿಸಿದ್ದಾಗ ದೇಶಪಾಂಡೆಗೆ ವಿಕೆಟ್ ಒಪ್ಪಿಸಿ 8 ರನ್ ಗಳಿಂದ ಶತಕ ವಂಚಿತರಾದರು.
ಕರ್ನಾಟಕ ತಂಡ ಒಂದು ಹಂತದಲ್ಲಿ 119 ರನ್ ಗೆ 2 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದ ಭರವಸೆ ಮೂಡಿಸಿತ್ತು. ಆದರೆ ನಂತರ 54 ರನ್ ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. 8 ಬ್ಯಾಟ್ಸ್ ಮನ್ ಗಳು ಎರಡಂಕಿಯ ಮೊತ್ತದ ಸಮೀಪವೂ ಬರಲಿಲ್ಲ.
ದೇಶಪಾಂಡೆ ಮತ್ತು ಅವಸ್ತಿ ತಲಾ 4 ವಿಕೆಟ್ ಪಡೆದು ಕರ್ನಾಟಕದ ಬೃಹತ್ ಮೊತ್ತದ ಕನಸಿಗೆ ತಣ್ಣಿರೆರಚಿದರು.
