Friday, April 25, 2025
Google search engine
Homeಕ್ರೀಡೆಸಾಲ್ಟ್, ಕೊಹ್ಲಿ ಅರ್ಧಶತಕ: ಆರ್ ಸಿಬಿ 9 ವಿಕೆಟ್ ಜಯಭೇರಿ

ಸಾಲ್ಟ್, ಕೊಹ್ಲಿ ಅರ್ಧಶತಕ: ಆರ್ ಸಿಬಿ 9 ವಿಕೆಟ್ ಜಯಭೇರಿ

ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯಭೇರಿ ಬಾರಿಸಿದೆ. ಈ ಮೂಲಕ ಐಪಿಎಲ್ ನಲ್ಲಿ 4ನೇ ಗೆಲುವು ದಾಖಲಿಸಿದೆ.

ಜೈಪುರದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿ ಆರಂಭಿಕರ ಆರ್ಭಟದಿಂದ ಗೆದ್ದು 4 ಗೆಲುವಿನೊಂದಿಗೆ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಆರ್ ಸಿಬಿ ಬೌಲರ್ ಗಳ ಶಿಸ್ತಿನ ದಾಳಿಗೆ ತತ್ತರಿಸಿದರೂ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆರ್ ಸಿಬಿ 17.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಆರ್ ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್ ಗೆ 92 ರನ್ ಪೇರಿಸಿ ಭರ್ಜರಿ ಆರಂಭ ನೀಡಿದರು. ಸಾಲ್ಟ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 65 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 62 ರನ್ ಸಿಡಿಸಿ ಮತ್ತೊಮ್ಮೆ ಚೇಸಿಂಗ್ ಮಾಸ್ಟರ್ ಎನಿಸಿಕೊಂಡರು.

ನಂತರ ಎರಡನೇ ವಿಕೆಟ್ ಗೆ ಕೊಹ್ಲಿ ಜೊತೆಗೂಡಿದ ದೇವದತ್ ಪಡಿಕಲ್ ಮುರಿಯದ 2ನೇ ವಿಕೆಟ್ ಗೆ 83 ರನ್ ಜೊತೆಯಾಟ ನಿಭಾಯಿಸಿದರು. ದೇವದತ್ ಪಡಿಕಲ್ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಆರ್ ಸಿಬಿ ಬೌಲರ್ ಗಳ ಶಿಸ್ತಿನ ದಾಳಿಗೆ ರನ್ ಗಳಿಸಲು ಪರದಾಡಿತು. ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 75 ರನ್ ಬಾರಿಸಿ ತಂಡವನ್ನು ಆಧರಿಸಿದರು.

ನಾಯಕ ಸಂಜು ಸ್ಯಾಮ್ಸನ್ (15), ರಿಯಾನ್ ಪರಾಗ್ (30) ಮತ್ತು ಧ್ರುವ ಜುರೆಲ್ (ಅಜೇಯ 35) ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದರು. ಆದರೆ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments