ಬೆಂಗಳೂರು: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಉಚ್ಛಾಟನೆ ಶಿಕ್ಷೆ ಹೊಸದೇನಲ್ಲ. ಈ ಹಿಂದೆಯೂ ಬಿಜೆಪಿಯಿಂದ ಎರಡು ಬಾರಿ ಉಚ್ಛಾಟನೆಗೊಂಡಿದ್ದ ಅವರಿಗೆ ಮೂರನೇ ಬಾರಿ ಉಚ್ಛಾಟನೆ ಶಾಕ್ ನೀಡಲಾಗಿದೆ.
ಕಳೆದ2009 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅಮಾನತ್ತಾಗಿದ್ದರು. ಯಡಿಯೂರಪ್ಪ, ಶೋಬಾ ಕರಂದ್ಲಾಜೆ ಸದಾನಂದಗೌಡ ವಿರುದ್ದ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿದ್ದರು. ನಂತರ ಜೆಡಿಎಸ್ ಪಕ್ಷ ಸೇರಿ 2013 ರಲ್ಲಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ 2014 ರಲ್ಲಿ ಯತ್ನಾಳ್ ಮೇಲಿನ ಅಮಾನತ್ತು ಶಿಕ್ಷೆ ರದ್ದು ಮಾಡಿ ಪಕ್ಷಕ್ಕೆ ಕರೆತರಲಾಯಿತು. ಆ ವೇಳೆ ಯಡಿಯೂರಪ್ಪ ಬಿಜೆಪಿಯಲ್ಲಿರಲಿಲ್ಲ.
2014 ರ ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗದ ಕಾರಣ 2016ರಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೇ ಕಾರಣ ಮತ್ತೆ 2016ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಯತ್ನಾಳ್ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ವಿಧಾನಪರಿಷತ್ ಆಯ್ಕೆಯಾಗಿ ಹೈಕಮಾಂಡ್ಗೆ ತಮ್ಮ ಶಕ್ತಿ ತೋರಿಸಿದ್ದರು.
2018 ರಲ್ಲಿ ಕೇಂದ್ರದ ವರಿಷ್ಟರು ಹಾಗೂ ಯಡಿಯೂರಪ್ಪ ಸೇರಿಕೊಂಡು ಯತ್ನಾಳ್ ವಿರುದ್ಧ ಅಮಾನತ್ತು ಶಿಕ್ಷೆ ರದ್ದು ಮಾಡಿ ವಾಪಸ್ ಬಿಜೆಪಿಗೆ ಕರೆ ತಂದರು. ಬಳಿಕ 2018 ರಲ್ಲಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಅಲ್ಲಿಂದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸಮರ ಸಾರಲು ಶುರು ಮಾಡಿದರು.
ಯಡಿಯೂರಪ್ಪ ಹಾಗೂ ವಿಜಯೇಂದ್ರ ರಾಜಕಾರಣದ ವಿರುದ್ದ ಅಬ್ಬರಿಸಿ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದರು. ಅಲ್ಲದೇ ಹೊಂದಾಣಿಕೆ ರಾಜಕೀಯ ಬಗ್ಗೆಯೂ ಪದೇ ಪದೇ ಬಹಿರಂಗವಾಗಿಯೇ ಬಿಎಸ್ವೈ ಕುಟುಂಬದ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಂದರು.ನಂತರ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ನಂತರ ಯತ್ನಾಳ್ ಹಾಗೂ ಯಡಿಯೂರಪ್ಪ ನಡುವೆ ಹಾವು ಮುಂಗುಸಿ ರೀತಿ ಜಗಳ ಮುಂದುವರಿದುಕೊಂಡು ಬಂತು.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿ ಜಯ ಕಂಡರು. ಆದರೆ ಯತ್ನಾಳ್ಗೆ ಟಿಕೆಟ್ ತಪ್ಪಿಸಲು ಇನ್ನಿಲದ ಪ್ರಯತ್ನಗಳು ನಡೆದಿದ್ದವು ಆದರೂ ಸಹ ಅದು ಯಶಸ್ವಿಯಾಗಿರಲಿಲ್ಲ. ನಂತರ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ದದ ಕಿಡಿ ಮಾತ್ರ ನಿಲ್ಲಲಿಲ್ಲ. ವಿಜಯಪುರದಲ್ಲಿ ಸೋಲಿಸಲು ವಿಜಯೇಂದ್ರ ತಂಡ ಕೆಲಸ ಮಾಡಿತ್ತು ಎಂದು ಯತ್ನಾಳ್ ಆರೋಪ ಮಾಡಿದ್ದರು
ಯಡಿಯೂರಪ್ಪ ಹಾಗೂ ಯತ್ನಾಳ್ ನಡುವಿನ ಗುದ್ದಾಟ ಮುಂದುವರಿದ ನಡುವೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಯ್ತು. ಇದರಿಂದ ಇದು ಯತ್ನಾಳ್ ಆಕ್ರೋಶಕ್ಕೆ ಕಾರಣವಾಯ್ತು. ಅಲ್ಲಿಂದ ಯಡಿಯೂರಪ್ಪನವರನ್ನು ಸೈಡಿಗೆ ಇಟ್ಟು ವಿಜಯೇಂದ್ರ ವಿರುದ್ಧ ನಿರಂತರ ವಾಗ್ದಾಳಿ ಮಾಡಿಕೊಂಡು ಬಂದರು. ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದರು. ಇದರಿಮದ ವಿಜಯೇಂದ್ರ ಹಾಗೂ ಅವರ ಬಣ ಈ ಬಗ್ಗೆ ಹೈಕಮಾಂಡ್ಗೆ ಸಾಕಷ್ಟು ಸಲ ದೂರು ನೀಡಿತ್ತು.
ಪದೇ ಪದೇ ರಾಜ್ಯಾಧ್ಯಕ್ಷ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಿರುವುದರಿಂದ ಬಿಜೆಪಿ ಕೇಂದ್ರದ ಶಿಸ್ತು ಸಮಿತಿ ಹಲವು ಬಾರಿ ನೊಟೀಸ್ ನೀಡಿತ್ತು. ಆದರೂ ತಲೆ ಕೆಡಿಸಿಕೊಳ್ಳದ ಯತ್ನಾಳ್, ನೋಟಿಸ್ ಬಂದಾಗ ಉತ್ತರ ನೀಡಿ ಬಳಿಕ ತಮ್ಮ ಮಾತಿನ ಸಮರ ಮುಂದುವರಿಸುತ್ತಿದ್ದರು. ಎರಡು ಬಾರಿ ಶೋಕಾಸ್ ನೋಟಿಸ್ ನೀಡಿದ್ದಾಗಲೂ ಸಹ ಯತ್ನಾಳ್ ಉತ್ತರ ಕೊಟ್ಟು ನಂತರ ಅದೇ ಪ್ರಕಾರ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಇದ್ದರು.
ಇತ್ತೀಚೆಗೆ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಲೇಬೇಕೆಂದು ಯತ್ನಾಳ್ ಪಟ್ಟು ಹಿಡಿದಿದ್ದರು. ಅದಕ್ಕಾಗಿ ವಿಜಯೇಂದ್ರ ವಿರೋಧಿ ಬಣದ ನಾಯಕರನ್ನು ಕೂಡಿಸಿಕೊಂಡು ಗುಪ್ತ್ ಗುಪ್ತ್ ಸಭೆಗಳನ್ನು ಮಾಡಲಾರಂಭಿಸಿದರು. ಹೀಗೆ ರೆಬೆಲ್ ನಾಯಕರ ತಂಡ ದೊಡ್ಡದಾಗಿ ಬೆಳೆದಂತೆ ಇತ್ತ ವಿಜಯೇಂದ್ರ ಬಣ ಸಹ ಯತ್ನಾಳ್ ವಿರುದ್ಧ ಸಿಡಿದೆದ್ದಿದೆ. ಇದರಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಎನ್ನುವುದು ಜಗಜ್ಜಾಹೀರಾಗಿದ್ದು, ಕೆಲ ನಿಷ್ಠಾವಂತ ನಾಯಕರು, ಕಾರ್ಯಕರ್ತರು ಬೇಸರಗೊಂಡಿದ್ದರು. ಈ ಬಣಬಡಿದಾಟಕ್ಕೆ ಯಾವಾಗ ಬ್ರೇಕ್ ಬೀಳುತ್ತಪ್ಪ ಎಂದು ಮಾತನಾಡಿಕೊಳ್ಳುತ್ತಿದ್ದರು.
ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮಸಿದ ಹೈಕಮಾಂಡ್ ನಾಯಕರು, ರೆಬೆಲ್ ತಂಡದ ನಾಯಕ ಯತ್ನಾಳ್ ಅವರನ್ನೇ ಸೈಲೆಂಟ್ ಮಾಡಿಸಿದ್ರೆ ಉಳಿದವರು ತೆಪ್ಪಗಿರುವುತ್ತಾರೆಂದು ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ ಯತ್ನಾಳ್ ಸಹ ಉತ್ತರಿಸಿ ಮತ್ತದೇ ತಮ್ಮ ರೆಬೆಲ್ ನಾಯಕರ ಜೊತೆ ಗೌಪ್ಯ ಸಭೆ ನಡೆಸುಕೊಂಡು ಬಂದಿದ್ದಾರೆ. ಹೀಗಾಗಿ ಅಂತಿಮವಾಗಿ ಹೈಕಮಾಂಡ್ ರೆಬೆಲ್ ತಂಡದ ಕ್ಯಾಪ್ಟನನ್ನೇ ಉಚ್ಛಾಟಿಸಿದರೆ ಉಳಿದವರು ಸಹಜವಾಗಿಯೇ ಗಪ್ ಚುಪ್ ಆಗುತ್ತಾರೆ ಎಂದು ತಿಳಿದು ಈ ತೀರ್ಮಾನ ತೆಗೆದುಕೊಂಡಿದೆ. ಇದರೊಂದಿಗೆ ಯತ್ನಾಳ್ ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಛಾಟನೆಯಾಗಿದ್ದಾರೆ.
ಈ ಹಿಂದೆ ಯತ್ನಾಳ್ ವಿರುದ್ಧದ ಅಮಾನತು ವಾಪಸ್ ಪಡೆದುಕೊಂಡು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಅದರಂತೆ ಮುಂದಿನ ದಿನಗಳಲ್ಲಿ ಯತ್ನಾಳ್ ವಿರುದ್ಧದ ಸಸ್ಪೆಂಡ್ ಆದೇಶ ವಾಪಸ್ ಪಡೆದುಕೊಂಡಡು ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಇದು ರಾಜಕೀಯ. ಯಾವ ಸಂದರ್ಭದಲ್ಲಿ ಏನು ಆಗುತ್ತೋ ಗೊತ್ತಾಗಲ್ಲ .



