Sunday, June 14, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಇಂಗು ಗುಂಡಿ ಶುಚಿಗೊಳಿಸುವಾಗ ಉಸಿರುಗಟ್ಟಿ ಮೂವರ ದುರ್ಮರಣ

ಬೆಂಗಳೂರಿನಲ್ಲಿ ಇಂಗು ಗುಂಡಿ ಶುಚಿಗೊಳಿಸುವಾಗ ಉಸಿರುಗಟ್ಟಿ ಮೂವರ ದುರ್ಮರಣ

ಬೆಂಗಳೂರು: ಮಳೆ ನೀರಿನ ಇಂಗು ಗುಂಡಿ ಶುಚಿಗೊಳಿಸುವಾಗ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶನಿವಾರ ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲದ ವೃತ್ತದ ಬಳಿ ಸಂಭವಿಸಿದೆ.

ಸ್ಥಳೀಯ ನಿವಾಸಿಗಳಾದ ಮುನಿಶಾಮಪ್ಪ (67), ರುದ್ರಕುಮಾರ್ (40) ಮತ್ತು ವಿಶ್ವನಾಥ್ ಆಚಾರಿ (24) ಮೃತಪಟ್ಟಿದ್ದು, ವೈಟ್‌ಫೀಲ್ಡ್​ ಪೊಲೀಸ್‌ ಠಾಣೆಯಲ್ಲಿ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.

ಮನೆ ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಗು ಗುಂಡಿಯನ್ನು ಬಳಸುತ್ತಿರಲಿಲ್ಲ. ಹೀಗಾಗಿ ಗುಂಡಿಯಲ್ಲಿ ತುಂಬಿಕೊಂಡಿದ್ದ, ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ದುರ್ವಾಸನೆ ಬರಲಾರಂಭಿಸಿತ್ತು. ರಾಸಾಯನಿಕ ಸಿಂಪಡಿಸಿ‌ ಶುಚಿಗೊಳಿಸಲು ಮುಂದಾಗಿದ್ದರು. ಈ ವೇಳೆ ಉಸಿರಾಟದ ತೊಂದರೆಯಾಗಿ ಮುನಿಶಾಮಪ್ಪ ಮೂರ್ಛೆ ಹೋಗಿದ್ದಾರೆ.

ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್​​ ಸಹ ಮೂರ್ಛೆ ಹೋಗಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕ ಕೂಡ ಮೂರ್ಛೆ ಹೋಗಿದ್ದಾನೆ. ವಿಶ್ವನಾಥ್ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಮೂವರನ್ನೂ ಅಕ್ಕಪಕ್ಕದ ಮನೆಯವರು ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದರಾದರೂ ಮಾರ್ಗಮಧ್ಯೆ ಮೂವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments