ಗಣ್ಯರು ಸೇರಿದಂತೆ ಸಾರ್ವಜನಿಕರು ಓಡಾಡುವ ಮೈಸೂರು ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. 100ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹುಲಿ ಸೆರೆ ಕಾರ್ಯಚರಣೆ ಆರಂಭಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಹುಲಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಆರಂಭದಲ್ಲಿ ಚಿರತೆ ಅಥವಾ ಯಾವುದೋ ಪ್ರಾಣಿ ಇರಬಹುದೆಂದು ಭಾವಿಸಿದ ಸಿಬ್ಬಂದಿ ವಾಹನದಲ್ಲಿ ಸಮೀಪಕ್ಕೆ ಹೋದಾಗ ಹುಲಿ ಎಂಬುದು ಖಚಿತವಾಗಿದೆ.
ಗಸ್ತು ಸಿಬ್ಬಂದಿ ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. 19 ಸೆಕೆಂಡ್ಗಳ ವಿಡಿಯೋದಲ್ಲಿ ಹುಲಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಓಡಾಡಿ ನಂತರ ಓಡಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದಾರೆ.
ಹುಲಿ ಕಂಡ ಹಿನ್ನೆಲೆಯಲ್ಲಿ ರಾತ್ರಿ ಪಾಳಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಯ ತಂಡ ಸ್ಥಳ ಪರಿಶೀಲಿಸಿದರು.
ಹುಲಿ ಪ್ರತ್ಯಕ್ಷವಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಕೂಂಬಿಂಗ್ ಆರಂಭಿಸಿದರು. 20ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಲಾಗಿದೆ. ಅರಣ್ಯ ಇಲಾಖೆ ಸಿಎಫ್ ರವಿಶಂಕರ್, ಡಿಸಿಎಫ್ ಪರಮೇಶ್ ನೇತೃತ್ವದಲ್ಲಿ ವಿಮಾನ ನಿಲ್ದಾಣದಲ್ಲಿ ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ, ಮೈಸೂರು ವಿಭಾಗದ ಸಿಬ್ಬಂದಿ, ಪಶುವೈದ್ಯ ಡಾ.ವಾಸಿಂ ಮಿರ್ಜಾ, ಡಾ.ಆದರ್ಶ್ ಒಳಗೊಂಡಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
2 ವರ್ಷ ಪ್ರಾಯದ ಹುಲಿ?:
ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷವಾದ ಹುಲಿ ಈ ಹಿಂದೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ತಾಯಿಂದ ಬೇರ್ಪಟ್ಟು ಸರಹದ್ದು ನಿರ್ಮಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಹುಡುಕಾಟ ನಡೆಸುತ್ತ ವಿಮಾನ ನಿಲ್ದಾಣದ ಆವರಣ ಪ್ರವೇಶಿಸಿರುವ ಸಾಧ್ಯತೆ ಇದೆ. 2 ವರ್ಷ ವಯಸ್ಸಿನ ಹುಲಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ವರ್ಷದ ಹಿಂದೆಯೂ ಮಂಡಕಳ್ಳಿ ವಿಮಾನ ನಿಲ್ದಾಣದ ಸುತ್ತಮುತ್ತ ಹುಲಿ ಸಂಚಾರವಿರುವುದು ಪತ್ತೆಯಾಗಿತ್ತು.
ಭಾನುವಾರ ಮಧ್ಯರಾತ್ರಿ ಮೈಸೂರು ವಿಮಾನ ನಿಲ್ದಾಣದ ಆವರಣದಲ್ಲಿ ಹುಲಿ ಕಾಣಿಸಿಕೊಂಡಿರುವ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೇ ಇಂದು ಕೂಡ ಕಾರ್ಯಾಚರಣೆ ನಡೆಸುತ್ತೇವೆ. ದುಬಾರೆ ಆನೆ ಶಿಬಿರದಿಂದ ನಾಲ್ಕು ಆನೆಗಳನ್ನು ಕರೆಸಿ ಕೂಂಬಿಂಗ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಫ್ ಪರಮೇಶ್ ಮಾಹಿತಿ ನೀಡಿದ್ದಾರೆ.



