ಸೋಲಿನ ಸುಳಿಗೆ ಸಿಲುಕಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಚೊಚ್ಚಲ ಶತಕ ಸಿಡಿಸಿ ತಿಲಕ್ ವರ್ಮಾ ನೆರವಾಗಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದಿದ್ದಾರೆ.
ಅಹಮದಾಬಾದ್ ನಲ್ಲಿ ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 199 ರನ್ ಕಲೆ ಹಾಕಿತು.
ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಸೋಲುಂಡು ಪಾತಾಳ ಸೇರಿರುವ 5 ಬಾರಿಯ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿಲಕ್ ವರ್ಮಾ ಶತಕ ಬಾರಿಸಿ ಆಸರೆಯಾದರು.
ತಿಲಕ್ ವರ್ಮಾ 45 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ ಶತಕ ಪೂರೈಸಿದರು. ಇದು ತಿಲಕ್ ವರ್ಮಾಗೆ ಐಪಿಎಲ್ ನಲ್ಲಿ ಚೊಚ್ಚಲ ಶತಕವಾಗಿದೆ.
2008ರ ಐಪಿಎಲ್ ಆವೃತ್ತಿಯಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ 45 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಸಿಡಿಸಿದ ದಾಖಲೆಯನ್ನು ತಿಲಕ್ ವರ್ಮಾ ಸರಿಗಟ್ಟಿದರು.
ತಿಲಕ್ ವರ್ಮಾ 38 ಎಸೆತಗಳಲ್ಲಿ 75 ರನ್ ಗಳಿಸಿದ್ದರು. ಆದರೆ 18ನೇ ಓವರ್ ನಲ್ಲಿ 26 ರನ್ ಕೊಳ್ಳೆ ಹೊಡೆದರು. ಪ್ರಸಿದ್ಧ ಕೃಷ್ಣ ಅವರ ಒಂದೇ ಓವರ್ ನಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಚಚ್ಚಿದರು. ಶತಕ ಪೂರೈಸುತ್ತಿದ್ದಂತೆ ತಿಲಕ್ ವರ್ಮಾ ಹಾರಿ ಸಂಭ್ರಮಿಸಿದರು.



