ತಿರುಪತಿ ದೇವಸ್ಥಾನದ ಆವರಣದಲ್ಲಿ ರೀಲ್ಸ್, ವೀಡಿಯೋ ಚಿತ್ರೀಕರಣವನ್ನು ನಿಷೇಧಿಸಿ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯಲು ದೇವಸ್ಥಾನದ ಆವರಣದಲ್ಲಿ ಅಸಭ್ಯ ಹಾಗೂ ಅಶ್ಲೀಲ ವೀಡಿಯೋಗಳ ಚಿತ್ರೀಕರಣ ಮಾಡುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ಆದೇಶ ಹೊರಡಿಸಿದೆ.
ಟಿಟಿಡಿ ಗುರುವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ದೇವಸ್ಥಾನದಲ್ಲಿ ರೀಲ್ಸ್ ಮಾಡುವುದು, ವೀಡಿಯೋ ಮಾಡುತ್ತಿರುವುದರಿಂದಕೇವಲ ದೇವರು ಹಾಗೂ ಸಂಪ್ರದಾಯಗಳಿಗೆ ವಿರುದ್ಧ ಆಗಿರುವುದು ಮಾತ್ರವಲ್ಲ, ಭಕ್ತರ ಭಾವನೆಗಳಿಗೂ ಧಕ್ಕೆ ಉಂಟು ಮಾಡುತ್ತಿದೆ. ಆದ್ದರಿಂದ ವೀಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.
ದೇವಸ್ಥಾನದ ಆವರಣದಲ್ಲಿ ರೀಲ್ಸ್ ಮತ್ತು ವೀಡಿಯೋ ಚಿತ್ರೀಕರಣಕ್ಕಾಗಿ ಅಸಭ್ಯ ಹಾಗೂ ಅಶ್ಲೀಲವಾಗಿ ಕೆಲವರು ವರ್ತಿಸುತ್ತಿದ್ದಾರೆ. ಆಧ್ಯಾತ್ಮಿಕ ಜಾಗದಲ್ಲಿ ಈ ರೀತಿಯ ವರ್ತನೆಗಳು ಸರಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ಜನರು ಮುಂದಿನ ದಿನಗಳಲ್ಲಿ ಸಭ್ಯತೆಯಿಂದ ವರ್ತಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.



