ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ಶ್ರೀಲಂಕಾ ಹೇಗೆ ದಹನವಾಯಿತೋ ಅದೇ ರೀತಿ ವೈಭವ್ ಸೂರ್ಯವಂಶಿಯನ್ನು ಕೆಣಕಿದ ಶ್ರೀಲಂಕಾ ಆಟಗಾರರು ತ್ರಿಕೋನ ಏಕದಿನ ಸರಣಿಯಲ್ಲಿ ಪಶ್ಚಾತಾಪ ಪಡಬೇಕಾಯಿತು.
ಹೌದು, ಹಿಂದಿನ ಪಂದ್ಯದಲ್ಲಿ ಮಗು ಇದು ಐಪಿಎಲ್ ಅಲ್ಲ ಎಂದು ರೇಗಿಸಿದ್ದ ಶ್ರೀಲಂಕಾ ಆಟಗಾರರಿಗೆ ವೈಭವ್ ಸೂರ್ಯವಂಶಿ ವಿಶ್ವದಾಖಲೆಯ ಸಿಡಿಲಬ್ಬರದ ಆಟದ ಮೂಲಕ ತಿರುಗೇಟು ನೀಡಿದ್ದಾರೆ.
ಡಂಬುಲಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಮಿಂಚಿನ ಆರಂಭ ನೀಡಿದರು. 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್ ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿದ ವಿಶ್ವದಾಖಲೆ ಬರೆದರು.
ಇದಕ್ಕೂ ಮುನ್ನ 12, 13. 15 ಎಸೆತಗಳಲ್ಲಿ ಅರ್ಧಶತಕ ಸಿಡಿಸುತ್ತಾ ಬಂದಿದ್ದ ವೈಭವ್ ಈ ಬಾರಿ ಶ್ರೀಲಂಕಾ ಬೌಲರ್ ಗಳ ಮೇಲೆ ಹರಿಹಾಯ್ದು ಬೌಂಡರಿ- ಸಿಕ್ಸರ್ ಗಳ ಸುರಿಮಳೆ ಸುರಿಸಿದರು.
ಅಂತಿಮವಾಗಿ ವೈಭವ್ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 94 ರನ್ ಗಳಿಸಿದ್ದಾಗ ಅರಸಿಂಘೆ ಎಸೆತದಲ್ಲಿ ಔಟಾಗುವ ಮೂಲಕ ಶತಕದ ಗೌರವದಿಂದ ವಂಚಿತರಾದರು.
ವೈಭವ್ ಆರ್ಭಟ ಎಷ್ಟು ಜೋರಾಗಿತ್ತೆಂದರೆ ಮೊದಲ ವಿಕೆಟ್ ಗೆ ವೈಭವ್ ಮತ್ತು ಪ್ರಿಯಾಂಶ್ ಆರ್ಯ 8.5 ಓವರ್ ಗಳಲ್ಲಿ 132 ರನ್ ಜೊತೆಯಾಟ ನಿಭಾಯಿಸಿದರು. ವಿಶೇಷ ಅಂದರೆ ಮೊದಲು ಔಟಾಗಿದ್ದು ವೈಭವ್. ಈ ಜೊತೆಯಾಟದಲ್ಲಿ 39 ರನ್ ಗಳಿಸಿದರು.



