ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರಸ್ತಂಭವಾಗಿರುವ ವಿರಾಟ್ ಕೊಹ್ಲಿಯನ್ನು 2008ರ ಹರಾಜಿನಲ್ಲಿ ಡೆಲ್ಲಿ ತಂಡದ ಕೈ ತಪ್ಪಿದ್ದು ಹೇಗೆ ಎಂದು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
2008ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟಿದ್ದರಿಂದ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದೂ ಅಲ್ಲದೇ ಸತತ 18 ವರ್ಷಗಳ ಕಾಲ ತಂಡವನ್ನು ಆಧರಿಸಿದ್ದಾರೆ.
ಐಪಿಎಲ್ ಚೊಚ್ಚಲ ಹರಾಜಿನಲ್ಲಿ ಕೊಹ್ಲಿಯನ್ನು ಖರೀದಿಸದೇ ಡೆಲ್ಲಿ ಮಾಡಿದ ಅತೀ ದೊಡ್ಡ ಎಡವಟ್ಟು ಮಾಡಿಕೊಂಡಿತು. ಸ್ವತಃ ದೆಹಲಿಯವರಾದ ಕೊಹ್ಲಿ ತವರಿನ ತಂಡ ಪ್ರತಿನಿಧಿಸುವ ಅವಕಾಶ ಕಳೆದುಕೊಂಡರೆ, ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಹಾಗೂ ಬಿಳಿ ಚೆಂಡಿನ ರಾಜನನ್ನು ಕಳೆದುಕೊಂಡಿತು.
2008ರಲ್ಲಿ ಚೊಚ್ಚಲ ಐಪಿಎಲ್ ಟಿ-20 ಟೂರ್ನಿಯ ವೇಳೆ ಡೆಲ್ಲಿ ತಂಡದಲ್ಲಿ ಸಾಕಷ್ಟು ಬ್ಯಾಟ್ಸ್ ಮನ್ ಗಳಿದ್ದರು. ಆಗ 19 ವರ್ಷದೊಳಗಿನವರ ವಿಶ್ವಕಪ್ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಬದಲು ಒಬ್ಬ ಪ್ರಮುಖ ಬೌಲರ್ ಗಾಗಿ ಪ್ರಯತ್ನಿಸಿದೆವು. ಇದರಿಂದ ಕೊಹ್ಲಿ ಆರ್ ಸಿಬಿ ಪಾಲಾದರು ಎಂದು ಸೆಹ್ವಾಗ್ ಹೇಳಿದ್ದಾರೆ.
ನಾನು ಡೆಲ್ಲಿ ತಂಡದ ನಾಯಕನಾಗಿದ್ದೆ. ಆಗ ನಾನು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡದೇ ಬೌಲರ್ ಪ್ರದೀಪ್ ಸಾಂಗ್ವನ್ ಅವರನ್ನು ಆಯ್ಕೆ ಮಾಡಿಕೊಂಡೆ. ಆಗ ಕೊಹ್ಲಿ ಹರಾಜಿನ ಪ್ರಮುಖ ಪಟ್ಟಿಯಲ್ಲಿ ಕೂಡ ಇರಲಿಲ್ಲ. ನಮ್ಮ ತಂಡದಲ್ಲಿ ನಾನು, ಗೌತಮ್ ಗಂಭೀರ್, ಶಿಖರ್ ಧವನ್, ತಿಲಕರತ್ನೆ ದಿಲ್ಶನ್ ಮತ್ತು ಎಡಿಬಿ ಡಿವಿಲಿಯರ್ಸ್ ಕೂಡ ಇದ್ದರು.
ತಂಡದಲ್ಲಿ ಬಹುತೇಕ ಪ್ರಮುಖ ಬ್ಯಾಟ್ಸ್ ಮನ್ ಗಳೇ ಇದ್ದರು. ಆದ್ದರಿಂದ ನಾವು ಬೌಲರ್ ಕಡೆ ಗಮನ ಹರಿಸಿದೆವು. ಕೊಹ್ಲಿಯನ್ನು ಬಿಟ್ಟು ಮಹೇಶ್ ಮತ್ತು ಪ್ರದೀಪ್ ಸಾಂಗ್ವನ್ ಅವರನ್ನು ಆಯ್ಕೆ ಮಾಡಿದೆವು. ಮೂರು ವರ್ಷಗಳ ಕಾಲ ಇವರು ನಮ್ಮ ತಂಡದಲ್ಲಿದ್ದರು. ಅಷ್ಟೂ ವರ್ಷವು ಉತ್ತಮ ಪ್ರದರ್ಶನ ನೀಡಿದರು ಎಂದು ವೀರೇಂದ್ರ ಸೆಹ್ವಾಗ್ ವಿವರಿಸಿದರು.
ಪ್ರದೀಪ್ ಸಾಂಗ್ವನ್ 2008ರಲ್ಲಿ 7 ಪಂದ್ಯಗಳಲ್ಲಿ 5 ವಿಕೆಟ್ ಪಡೆದರು. ಆದರೆ ನಂತರದ ಆವೃತ್ತಿಯಲ್ಲಿ ಡೆಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, 13 ಪಂದ್ಯಗಳಿಂದ 15 ವಿಕೆಟ್ ಪಡೆದು ಮಿಂಚಿದರು, ಸಾಂಗ್ವನ್ 3 ಆವೃತ್ತಿಗಳಲ್ಲಿ 29 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ ಐಪಿಎಲ್ ನ ದಂತಕತೆ ಆಗಿ ಮೂಡಿಬಂದರು. ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್, ಅತ್ಯಧಿಕ ಅರ್ಧಶತಕ ಸೇರಿದಂತೆ ಹಲವು ದಾಖಲೆ ಬರೆದಿದ್ದಾರೆ. ಅಲ್ಲದೇ ಸತತ 18 ವರ್ಷ ಒಂದೇ ತಂಡದಲ್ಲಿ ಆಡಿರುವ ಏಕೈಕ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆಡುವವರೆಗೂ ನಾನು ಆರ್ ಸಿಬಿ ಪರ ಆಡುತ್ತೇನೆ. ಬೇರೆ ಯಾವುದೇ ತಂಡದ ಪರ ಆಡುವುದಿಲ್ಲ. ಬೆಂಗಳೂರು ನನಗೆ ಎರಡನೇ ತವರು ಮನೆ ಇದ್ದಂತೆ ಎಂದು ಹೇಳಿದ್ದಾರೆ.



