ಚಿತ್ರದುರ್ಗ: ವಿಆರ್ ಎಸ್ ಬಡಾವಣೆಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಮೃತ ರೇಣುಕಾ ಸ್ವಾಮಿ ತಂದೆ ಶಿವನಗೌಡರ್, ತಾಯಿ ರತ್ನಪ್ರಭ ಹಾಗೂ ರೇಣುಕಾಸ್ವಾಮಿ ಪತ್ನಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನಿನಲ್ಲಿ ನಮಗೆ ನಂಬಿಕೆ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ತಂದೆ ಶಿವನಗೌಡರ್ ಮಾತನಾಡಿ, ಈ ದಿನ ದರ್ಶನ್ ಅವರ ಬೇಲ್ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ರದ್ದಾಗಿದೆ. ಅರೆಸ್ಟ್ ಮಾಡಲು ಆದೇಶ ಆಗಿದೆ. ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು. ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಈಗ ಕಾನೂನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ತೀರ್ಪು ಬಂದಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ಹೆಚ್ಚು ನಂಬಿಕೆ ಹುಟ್ಟಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯಾರೂ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಿದೆ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂದು ಗೊತ್ತಾಗಿದೆ, ಯಾರು ತಪ್ಪು ಮಾಡಿದ್ದಾರೊ ಅವರಿಗೆ ಶಿಕ್ಷೆಯಾಗಲಿ, ಕಾನೂನಿನಲ್ಲಿ ಯಾವ ರೀತಿಯಲ್ಲಿ ಶಿಕ್ಷೆ ಆಗಬೇಕು ಅದೇ ಶಿಕ್ಷೆ ಕೊಡಲಿ ಎಂದಿದ್ದಾರೆ.
ಕೆಳ ಹಂತದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ಆಗಬೇಕು. ಯಾರೇ ದೊಡ್ಡವರು ಆದರೂ ಕಾನೂನು ಒಂದೇ ಎಂದು ಸಾಬೀತು ಆಗಿದೆ. ನಮಗೆ ಈ ಪ್ರಕರಣದಲ್ಲಿ ತುಂಬಾ ಆತಂಕ ಇತ್ತು, ಸುಪ್ರೀಂ ಕೋರ್ಟ್ ನಿರ್ಧಾರ ವಿಶ್ವಾಸ ಬಂದಿದೆ. ನಿತ್ಯ ಎಂದಿನಂತೆ ಪೂಜೆ ಮಾಡುವಾಗ ಈ ತೀರ್ಪು ಬಂದಿದೆ ಎಂದರು.
ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮಾತನಾಡಿ, ಕೋರ್ಟಿಗೆ ಎಷ್ಟು ಶಕ್ತಿಶಾಲಿ ವ್ಯಕ್ತಿ ಆದರೂ ತಲೆ ಬಾಗಲೇ ಬೇಕು, ನಮಗೆ ನ್ಯಾಯ ಸಿಕ್ಕಿದೆ.ಟ್ರಯಲ್ ಇನ್ನೂ ಕೂಡಾ ನಡೆಯಬೇಕಿದೆ. ನಮಗೆ ಇದೀಗ ಸಂತೋಷ ವಾಗಿದೆ. ಕಾನೂನಿನಲ್ಲಿ ಏನೂ ತೀರ್ಪು ಬರುತ್ತೋ ಚಂದು ಆತಂಕವಾಗಿತ್ತು, ಕೋರ್ಟ್ ತೀರ್ಪು ನಿಂದ ನಂಬಿಕೆ ಬಂದಿದೆ ಎಂದರು.



