Saturday, May 30, 2026
Google search engine
Homeಜ್ಯೋತಿಷ್ಯಕೃಷ್ಣ ಜನ್ಮಾಷ್ಟಮಿ ಪೂಜೆಗೆ ಮುಹೂರ್ತ, ಪೂಜೆ ಮಾಡುವ ವಿಧಾನ!

ಕೃಷ್ಣ ಜನ್ಮಾಷ್ಟಮಿ ಪೂಜೆಗೆ ಮುಹೂರ್ತ, ಪೂಜೆ ಮಾಡುವ ವಿಧಾನ!

ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವು ಅತ್ಯಂತ ಪವಿತ್ರವಾದ ಹಾಗೂ ಸಂತೋಷದಾಯಕವಾದ ಹಬ್ಬವಾಗಿದೆ. ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ದೇಶ – ವಿದೇಶಗಳಲ್ಲೂ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.

ಶ್ರೀಕೃಷ್ಣನು ಮಹಾವಿಷ್ಣು ದೇವನ 8ನೇ ಅವತಾರವಾಗಿದ್ದು, ವಿಷ್ಣು ದೇವನು ಈ ಕೃಷ್ಣನ ಅವತಾರದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭೂಮಿಯಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಈ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನನ್ನು ಪೂಜಿಸುವುದರ ಜೊತೆಗೆ ಆತನ ಭಜನೆಗಳನ್ನು, ಮಂತ್ರಗಳನ್ನು ಪಠಿಸುವ ಸಂಪ್ರದಾಯವಿದೆ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿ ದಿನದಂದು ಮಧ್ಯಾರಾತ್ರಿ ಸಮಯದಲ್ಲಿ ಮಾಡುವ ಪೂಜೆಯು ಹೆಚ್ಚು ಶ್ರೇಷ್ಠವೆನಿಸಿಕೊಂಡಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ

ಕೃಷ್ಣ ಜನ್ಮಾಷ್ಟಮಿಯು ತನ್ನ ದುಷ್ಟತನದ ಪ್ರತೀಕವಾದ ಮಾವ ಕಂಸನ ಆಳ್ವಿಕೆಯನ್ನು ಕೊನೆಗೊಳಿಸಲು ಮತ್ತು ಜಗತ್ತಿನಲ್ಲಿ ಧರ್ಮದ ಸಮತೋಲನವನ್ನು ಪುನಃಸ್ಥಾಪಿಸಲು ಜನಿಸಿದ ಶ್ರೀಕೃಷ್ಣನ ದೈವಿಕ ಜನನದ ದಿನವನ್ನು ಸಂಕೇತಿಸುತ್ತದೆ. ಈ ದಿನವನ್ನು ಕೆಡುಕಿನ ಮೇಲೆ ಒಳಿತನ ವಿಜಯವೆಂದು, ಬ್ರಹ್ಮಾಂಡದಲ್ಲಿ ದುಷ್ಟತನವನ್ನು ನಾಶ ಮಾಡಿ ಒಳಿತನ್ನು ಪುನಃ ಸ್ಥಾಪಿಸುವ ದಿನವಾಗಿದೆ.

ಈ ಶುಭ ದಿನದಂದು ಕೃಷ್ಣನನ್ನು ದೈವಿಕ ಸಂತೋಷ ಮತ್ತು ಪ್ರೀತಿಯ ಸಂಕೇತವೆಂದು ಪೂಜಿಸಲಾಗುತ್ತದೆ. ರಾಧೆಯೊಂದಿಗಿನ ಅವನ ಸಂಬಂಧವು ಭಕ್ತ ಮತ್ತು ದೇವರ ಆಧ್ಯಾತ್ಮಿಕ ಒಕ್ಕೂಟವನ್ನು ಸಂಕೇತಿಸುತ್ತದೆ. ಈ ಹಬ್ಬವು ಆಧ್ಯಾತ್ಮಿಕ ಪ್ರಯೋಜನವನ್ನು ಸಹ ಹೊಂದಿದೆ, ಏಕೆಂದರೆ ಈ ದಿನ ನಾವು ಮಾಡುವ ಪೂಜೆಯು ಮೋಕ್ಷವನ್ನು ನೀಡುತ್ತದೆ. ಜನ್ಮ ಜನ್ಮಗಳ ಪಾಪವನ್ನು ಶುದ್ಧೀಕರಿಸುತ್ತದೆ. ಭಕ್ತರಿಗೆ ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನದ ಪೂಜೆಯು ಮನೆಗೆ ಶಾಂತಿಯನ್ನು, ಸಮೃದ್ಧಿಯನ್ನು, ಸಂತಾನ ಭಾಗ್ಯವನ್ನು ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ ಎನ್ನುವ ನಂಬಿಕೆಯಿದೆ.

2025ರ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತ

ಜನರು ತಮ್ಮ ದೇವನಾದ ಶ್ರೀಕೃಷ್ಣನ ಪೂಜೆಯನ್ನು ಕೃಷ್ಣ ಜನ್ಮಾಷ್ಟಮಿ ದಿನದಂದು ವಿಧಿ – ವಿಧಾನಗಳ ಪ್ರಕಾರ ಮಾಡುತ್ತಾರೆ. ಈ ದಿನದ ಪೂಜೆಗೆ ಶುಭ ಮುಹೂರ್ತವು ಬಹಳ ಮುಖ್ಯವಾಗಿರುತ್ತದೆ.
2025ರ ಶ್ರೀಕೃಷ್ಣ ಜನ್ಮಾಷ್ಟಮಿ ದಿನಾಂಕ: 2025ರ ಆಗಸ್ಟ್ 16ರಂದು ಶನಿವಾರ
ಅಷ್ಟಮಿ ತಿಥಿ ಆರಂಭ: 2025ರ ಆಗಸ್ಟ್‌ 15ರಂದು ರಾತ್ರಿ 11:49 ರಿಂದ
ಅಷ್ಟಮಿ ತಿಥಿ ಮುಕ್ತಾಯ: 2025ರ ಆಗಸ್ಟ್‌ 16ರಂದು ರಾತ್ರಿ 9:33 ರವರೆಗೆ
ಮಧ್ಯರಾತ್ರಿ ಪೂಜೆ: 2025ರ ಆಗಸ್ಟ್‌ 16ರಂದು ಮಧ್ಯರಾತ್ರಿ 12:04 ರಿಂದ ಮಧ್ಯರಾತ್ರಿ 12:47 ರವರೆಗೆ
ಕೃಷ್ಣ ಜನಿಸಿದ ಸಮಯ: ಮಧ್ಯರಾತ್ರಿ 12:25 ಕ್ಕೆ
ಪಾರಣ ಸಮಯ: 2025ರ ಆಗಸ್ಟ್‌ 16ರಂದು ರಾತ್ರಿ 9:34 ರ ನಂತರ
ಈ ದಿನದಂದು ಮಧ್ಯರಾತ್ರಿಯ ಸಮಯದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದು ಒಳ್ಳೆಯದು.

ಪೂಜೆ ಮಾಡುವುದು ಹೇಗೆ?

ಕೃಷ್ಣನ ಭಕ್ತರು ಈ ಶುಭ ದಿನದಂದು ಅಚಲ ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ದಿನವಿಡೀ ಉಪವಾಸ ವ್ರತವನ್ನು ಕೂಡ ಆಚರಿಸುತ್ತಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಮುಂಜಾನೆ ಬೇಗ ಎದ್ದು ಶುದ್ಧರಾಗಿ ಶುದ್ಧವಾದ ಅಥವಾ ಹೊಸ ಬಟ್ಟೆಯನ್ನು ಧರಿಸಿ, ಮನೆಯನ್ನು ಹಾಗೂ ಪೂಜೆ ಮಾಡುವ ಸ್ಥಳವನ್ನು ಶುದ್ಧೀಕರಿಸಿ.

ಶ್ರೀಕೃಷ್ಣನನ್ನು ಕೂರಿಸಿ ಪೂಜೆ ಮಾಡುವ ಸ್ಥಳವನ್ನು ಹೂವುಗಳು, ರಂಗೋಲಿಯಿಂದ ಅಲಂಕರಿಸಿ.
ಬಾಲ ಕೃಷ್ಣನನ್ನು ಪೂಜಿಸುವುದಕ್ಕಾಗಿ ಸರ್ವಾಲಂಕಾರದಿಂದ ತೊಟ್ಟಿಲನ್ನು ಸಿದ್ಧಗೊಳಿಸಿ.

ಪೂಜೆ ಮಾಡುವ ಸ್ಥಳದಲ್ಲಿ ಬಾಲ ಗೋಪಾಲನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ತಯಾರಿಸಿದ ಪಂಚಾಮೃತದಿಂದ ಕೃಷ್ಣನಿಗೆ ಅಭಿಷೇಕವನ್ನು ಮಾಡಬೇಕು. ಕೃಷ್ಣನ ಫೋಟೋಗೆ ಪೂಜೆಯನ್ನು ಮಾಡುತ್ತಿದ್ದರೆ ಪಂಚಾಮೃತವನ್ನು ಫೋಟೋದ ಮೇಲೆ ಸಂಪಡಿಸಿ ಸಾಕು.

ಈ ದಿನ ಹಿತ್ತಾಳೆಯ ಕೃಷ್ಣನ ವಿಗ್ರಹವನ್ನು ಪೂಜಿಸುವುದು ಒಳ್ಳೆಯದು.

ಈ ದಿನ ಕೃಷ್ಣನ ವಿಗ್ರಹಕ್ಕೆ ಹಳದಿ, ಕೆಂಪು ಅಥವಾ ಗುಲಾಬಿ ಬಣ್ಣದ ಬಟ್ಟೆಯನ್ನು ತೊಡಿಸಿ, ಆಭರಣ ಮತ್ತು ಹೂವುಗಳಿಂದ ಅಲಂಕಾರ ಮಾಡಬೇಕು.

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ತುಳಸಿ ಎಲೆಗಳನ್ನು, ಬೆಣ್ಣೆಯನ್ನು, ಹಣ್ಣುಗಳನ್ನು, ಪಂಜಿರಿಯನ್ನು, ಲಡ್ಡುಗಳನ್ನು ಸೇರಿದಂತೆ ಇನ್ನಿತರ ಖಾದ್ಯವನ್ನು ನೈವೇದ್ಯವಾಗಿ ಅರ್ಪಿಸಬೇಕು.
ಕೃಷ್ಣನಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ಧೂಪ – ದೀಪವನ್ನು ಬೆಳಗಿಸಿ.

ಕೃಷ್ಣ ಜನ್ಮಾಷ್ಟಮಿ ಶುಭ ದಿನದಂದು ಮಧ್ಯರಾತ್ರಿ ಸಮಯದಲ್ಲಿ ಕೃಷ್ಣನನ್ನು ಪೂಜಿಸಿ, ಕೃಷ್ಣನ ಭಜನೆಗಳನ್ನು, ಕೀರ್ತನೆಗಳನ್ನು ಹಾಡಬೇಕು.

ಸರ್ವಾಲಂಕಾರ ಮಾಡಿದ ಕೃಷ್ಣನ ವಿಗ್ರಹವನ್ನು ಅಲಂಕರಿಸಿದ ತೊಟ್ಟಿಲಿನಲ್ಲಿ ಇಟ್ಟು ಮೆಲ್ಲಗೆ ತೂಗಬೇಕ

ಶ್ರೀಕೃಷ್ಣ ಜನ್ಮಾಷ್ಟಮಿ ಮಂತ್ರಗಳು

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನ ಮಂತ್ರಗಳನ್ನು ಪಠಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಈ ದಿನದಂದು ಕೃಷ್ಣನ ಮಂತ್ರಗಳನ್ನು ಪಠಿಸುವುದರಿಂದ ಕೃಷ್ಣನ ದೈವಿಕ ಆಶೀರ್ವಾದಗಳನ್ನು ಪಡೆದುಕೊಳ್ಳಬಹುದಾಗಿದೆ.

“ಓಂ ನಮೋ ಭಗವತೇ ವಾಸುದೇವಾಯ”
“ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ”
“ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತಃ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ”
”ಓಂ ದೇವಕಿನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್”

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ದಹಿ ಹಂಡಿ ಆಚರಣೆಗಳು

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನವಾದ ಆಗಸ್ಟ್‌ 16ರಂದು ಶನಿವಾರ ಹೆಚ್ಚಿನ ಸ್ಥಳಗಳಲ್ಲಿ ಕೃಷ್ಣನನ್ನು ಪೂಜಿಸಿದ ನಂತರ ದಹಿ ಹಂಡಿ(ಮೊಸರಿನ ಕುಡಿಕೆ) ಆಚರಣೆಯನ್ನು ನಡೆಸಲಾಗುತ್ತದೆ. ಈ ದಿನದಂದು ಬೀದಿ – ಬೀದಿಗಳಲ್ಲಿ ದಹಿ ಹಂಡಿಯನ್ನು ಒಡೆಯಲಾಗುತ್ತದೆ.

ಈ ಆಚರಣೆಯನ್ನು ನಡೆಸುವುದಕ್ಕಾಗಿ ಶ್ರೀಕೃಷ್ಣನ ಭಕ್ತರು ಗುಂಪುಗಳಾಗಿ ಸೇರಿಕೊಂಡು ಮೊಸರಿನಿಂದ ತುಂಬಿದ ಮಡಕೆಗಳನ್ನು ಒಡೆಯಲು ಎತ್ತರದ ಮಾನವ ಪಿರಮಿಡ್‌ಗಳನ್ನು ರೂಪಿಸುತ್ತಾರೆ. ನಂತರ ಆ ಗುಂಪಿನಲ್ಲಿ ನಿಗದಿಪಡಿಸಿದ ವ್ಯಕ್ತಿ ಪಿರಮಿಡ್‌ನ್ನು ಏರಿ ಮೊಸರು ಕುಡಿಕೆಯನ್ನು ಅಥವಾ ಮೊಸರಿನ ಮಡಿಕೆಯನ್ನು ಒಡೆಯುತ್ತಾನೆ. ಇದು ಶ್ರೀಕೃಷ್ಣನ ಬಾಲ ಲೀಲೆಯನ್ನು ಮರುಸೃಷ್ಟಿಸುವ ಆಚರಣೆಯಾಗಿದೆ.

-ಡಾ. ಎಂ.ಆರ್.‌ ಸವಿತಾ, ಖ್ಯಾತ ಜ್ಯೋತಿಷಿ, ಮೈಸೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments