ಕಣ್ಣಿನ ಸೋಂಕಿನಿಂದ ನೋವಿನ ಕಾರಣ ಕೂಲಿಂಗ್ ಗ್ಲಾಸ್ ಧರಿಸಿ ಅಖಾಡಕ್ಕೆ ಇಳಿದ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ ಮನ್ ಶಾಯಿ ಹೋಪ್ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವಾದ ಶುಕ್ರವಾರ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ ನಲ್ಲಿ ಅಲ್ಪ ಮೊತ್ತಕ್ಕೆ 4 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು.
ಈ ಸಂದರ್ಭದಲ್ಲಿ ಕಣ್ಣಿನ ಸೋಂಕಿಗೆ ಗುರಿಯಾಗಿದ್ದ ಶಾಯಿ ಹೋಪ್ ಅಖಾಡಕ್ಕೆ ಇಳಿಯುವುದು ಕಷ್ಟವಾಗಿತ್ತು. ಬಿಸಿಲಿನ ನಡುವೆ ಕಣ್ಣಿನ ನೋವಿನ ನಡುವೆ ಆಡಲು ಅಸಾಧ್ಯವಾಗಿದ್ದರೂ ತಂಡದ ನೆರವಿಗೆ ಧಾವಿಸಿದ ಶಾಯಿ ಹೋಪ್ ಶತಕ ಸಿಡಿಸಿದ್ದೂ ಅಲ್ಲದೇ ಅಜೇಯರಾಗಿ ಉಳಿಯುವ ಮೂಲಕ ಕಿವೀಸ್ ಬೌಲರ್ ಗಳಿಗೆ ಸವಾಲಾದರು.
ಶಾಯಿ ಹೋಪ್ ಅಜೇಯ 116 ರನ್ ಗಳಿಸಿದ್ದೂ ಅಲ್ಲದೇ ಜಸ್ಟಿನ್ ಗ್ರೀವ್ (55) ಜೊತೆ ಮುರಿಯದ ನಾಲ್ಕನೇ ವಿಕೆಟ್ ಗೆ 140 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದ್ದಾರೆ.
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 231 ಮತ್ತು ಎರಡನೇ ಇನಿಂಗ್ಸ್ ನಲ್ಲಿ 8 ವಿಕೆಟ್ ಗೆ 466 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನಿಂಗ್ಸ್ ನಲ್ಲಿ 167 ರನ್ ಗೆ ಆಲೌಟಾಗಿದ್ದ ವೆಸ್ಟ್ ಇಂಡೀಸ್ ಗೆಲ್ಲಲು 531 ರನ್ ಗಳ ಕಠಿಣ ಗುರಿ ಪಡೆದಿದೆ.
ನಾಲ್ಕನೇ ದಿನದಾಟದ ವೇಳೆ ವೆಸ್ಟ್ ಇಂಡೀಸ್ 72 ರನ್ ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಶಾಯಿ ಹೋಪ್ 183 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 116 ರನ್ ಬಾರಿಸಿ ಅಜೇಯರಾ ಉಳಿದಿದ್ದಾರೆ.
ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿದ್ದು, ಈ ಪಂದ್ಯ ಗೆಲ್ಲಬೇಕಾದರೆ ಪಂದ್ಯದ ಕೊನೆಯ ದಿನವಾದ ಶನಿವಾರ 319 ರನ್ ಗಳಿಸಬೇಕಾದ ಸವಾಲು ಹೊಂದಿದೆ.



