ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳೆಯರ ಪ್ರೀಮಿಯರ್ ಲೀಗ್ ಟಿ-20 ಪಂದ್ಯದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ನಾಯಕಿ ಸ್ಮೃತಿ ಮಂದಾನ ಎರಡನೇ ಬಾರಿ ಟಾಸ್ ಗೆದ್ದು ತೇವಗೊಂಡ ಪಿಚ್ ನ ಲಾಭ ಪಡೆಯಲು ಮತ್ತೊಮ್ಮೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ನಂತರ ಮಾತನಾಡಿದ ಸ್ಮೃತಿ ಮಂದಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಪ್ರೇಮಾ ರಾವತ್ ಬದಲು ಗೌತಮಿ ನಾಯಕ್ ಅವರನ್ನು ಆಡಿಸಲಾಗುತ್ತಿದೆ ಎಂದರು.
ಮೊದಲ ಪಂದ್ಯದಲ್ಲಿ ನಾದಿನೆ ಅವರ ಆಲ್ ರೌಂಡ್ ಪ್ರದರ್ಶನದಿಂದ ಆರ್ ಸಿಬಿ ಗೆಲುವು ಕಂಡಿತು. ನಾವು ಪ್ರತೀ ಪಂದ್ಯದಲ್ಲೂ ಒಬ್ಬೊಬ್ಬ ಗೆಲುವಿನ ರೂವಾರಿಗಳನ್ನು ಹುಡುಕುವ ಪ್ರಯತ್ನ ಮಾಡಲಿದ್ದೇವೆ. ಹಾಗಾಗಿ ತಂಡದಲ್ಲಿ ಬದಲಾವಣೆ ಮಾಡಲು ಬಯಸಿದ್ದೇವೆ ಎಂದು ಅವರು ಹೇಳಿದರು.
ಆರ್ ಸಿಬಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದು ಮಹಿಳೆಯರ ಪ್ರೀಮಿಯರ್ ಲೀಗ್ ನಲ್ಲಿ ಶುಭಾರಂಭ ಮಾಡಿತ್ತು.



