ಪತಿಯಿಂದ ದೂರವಾಗಿದ್ದ ಪತ್ನಿ ಡೆತ್‌ನೋಟ್ ಬರೆದಿಟ್ಟು ಮಗಳ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ನಗರದ ನೆಹರೂನಗರ ಬಡಾವಣೆಯಲ್ಲಿ ಚನ್ನಪಟ್ಟಣ ಮೂಲದ ರಶ್ಮಿ (28) ಹಾಗೂ ಅವರ ಮಗಳು ದಿಶಾ (9) ನೇಣಿಗೆ ಶರಣಾಗಿದ್ದಾರೆ.
ಕಳೆದ 5 ವರ್ಷದಿಂದ ಪತಿಯಿಂದ ದೂರವಾಗಿದ್ದ ರಶ್ಮಿ ಮಂಡ್ಯದ ನೆಹರೂ ನಗರದ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಇದರಿಂದ ಮನನೊಂದಿದ್ದ ರಶ್ಮಿ, ಡೆತ್‌ನೋಟ್ ಬರೆದಿಟ್ಟು ಮಗಳೊಂದಿಗೆ ನೇಣಿಗೆ ಶರಣಾಗಿದ್ದಾರೆ.
ಡೆತ್‌ನೋಟ್ ನಲ್ಲಿ ಏನಿದೆ?
ರಶ್ಮಿ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ ಐದು ವರ್ಷದಿಂದ ಜೀವನ ಮಾಡುತ್ತಿದ್ದೇನೆ. ಪತಿಯೂ ಬೇರೆ ಮದುವೆ ಆಗುತ್ತೇನೆ. ನನಗೂ ನಿನಗೂ ಸಂಬಂಧ ಇಲ್ಲ ಎಂದು ಬರೆದುಕೊಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನು ಚೆನ್ನಾಗಿ ನೋಡಿಕೋ ಅಣ್ಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಮಂಡ್ಯ ಪೂರ್ವ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.



