ರಾಜಧಾನಿ ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ.
ಈಶಾನ್ಯ ದೆಹಲಿಯ ಮುಸ್ತಫಬಾದ್ ನಲ್ಲಿ ಶನಿವಾರ ಬೆಳಿಗ್ಗೆ ಕಟ್ಟಡ ಕುಸಿದಿದ್ದು, ಸಂಜೆ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಅಧಿಕಾರಿಗಳು ಕಟ್ಟಡದ ಮಾಲೀಕ ಟೆಹಸಿನ್ ಹಾಗೂ ಅವರ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11 ಮಂದಿ ಅಸುನೀಗಿದ್ದಾರೆ ಎಂದು ತಿಳಿಸಿದ್ದಾರೆ.
ಕಟ್ಟಡ ಕುಸಿದಿದ್ದರಿಂದ 7 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಘಟನೆ ಕುರಿತು ದೆಹಲಿ ಸಿಎಂ ರೇಖಾ ಗುಪ್ತಾ ತನಿಖೆಗೆ ಆದೇಶಿಸಿದ್ದಾರೆ.
ನೆಲಮಳಿಗೆಯ 3-4 ಅಂಗಡಿಗಳಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಇದರಿಂದ ಕಟ್ಟಡ ಕುಸಿದಿದೆ ಎಂದು ಹೇಳಲಾಗಿದೆ. ಸುಮಾರು 12 ಗಂಟೆ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.



