ಬೆಂಗಳೂರು: ಖಾಸಗಿ ಕಾರ್ಖಾನೆಯ ಎರಡು ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು, 16 ಮಂದಿ ಗಾಯಗೊಂಡರುವ ದುರ್ಘಟನೆ ಮಂಗಳವಾರ ರಾತ್ರಿ ಹೊಸಕೋಟೆ ಸಂತೆ ಗೇಟ್ ಫ್ಲೈಓವರ್ ಬಳಿ ಸಂಭವಿಸಿದೆ.
ಚಿಕ್ಕಬಳ್ಳಾಪುರದ ಪ್ರಭಾಕರ್ (42) ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲಸ ಮುಗಿಸಿಕೊಂಡು ಕಾರ್ಮಿಕರನ್ನು ರಾತ್ರಿ 11ರ ವೇಳೆ ಹೋಗುವಾಗ ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಹೊಸಕೋಟೆ ಸಂಚಾರ ಪೊಲೀಸ್ ಪ್ರಕರಣ ದಾಖಲಿಸಿ ಬಸ್ ಚಾಲಕರನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ವೃದ್ಧ ದುರ್ಮರಣ:
ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡುಪುರ ಗ್ರಾಮದ ಬಳಿ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ತಿಮ್ಮರಾಯಪ್ಪ (60) ಮೃತಪಟ್ಟಿದ್ದಾರೆ.
ಪಾಂಡುಪುರ ಗ್ರಾಮದ ತಿಮ್ಮರಾಯಪ್ಪ ಅವರು ನಿನ್ನೆ ರಾತ್ರಿ ರಸ್ತೆ ದಾಟುವ ವೇಳೆ ಈ ದುರ್ಘಟನೆ ಸಂಭವಿಸಿದೆ.
60 ಗ್ರಾಂ ಚಿನ್ನ ಸುಲಿಗೆ:
ತಿರುಮಲ ಶೆಟ್ಟಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗಲು ಗ್ರಾಮದ ಬಳಿ ನಿನ್ನೆ ಮಧ್ಯಾಹ್ನ ಆಂಧ್ರಪ್ರದೇಶದ ನಿರ್ಮಲಾ ಎನ್ನುವರು ಉಬರ್ ಕಾರ್ ಬುಕ್ ಮಾಡಿ, ಕಾರಿನಲ್ಲಿ ಗಣಗಲು ಗ್ರಾಮಕ್ಕೆ ಹೋಗುತ್ತಿದ್ದರು.
ಮಾರ್ಗ ಮಧ್ಯದಲ್ಲಿ ಕಾರಿನ ಚಾಲಕ ಹತ್ತಿರದ ಮಾರ್ಗವಾಗಿ ಕರೆದುಕೊಂಡು ಹೋಗುತ್ತೇನೆ ಎಂದು ನಿರ್ಮಲ ಅವರನ್ನು ನಂಬಿಸಿ ಚಾಕು ತೋರಿಸಿ 60 ಗ್ರಾಂ ಚಿನ್ನದ ಸರಕಿತ್ತಿಕೊಂಡು ಪರಾರಿಯಾಗಿದ್ದಾನೆ. ತಿರುಮಲ ಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.



