ಡೊನಾಲ್ಡ್ ಟ್ರಂಪ್ ನೂತನ ತೆರಿಗೆ ಹೊರೆಗೆ ಭಾರತದ ಷೇರು ಮಾರುಕಟ್ಟೆ 10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಸೋಮವಾರ ಮಾರುಕಟ್ಟೆ ವಹಿವಾಟು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರು 20 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.27ರಷ್ಟು ತೆರಿಗೆ ವಿಧಿಸಿದ್ದರಿಂದ ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಅತೀ ಹೆಚ್ಚು ಹೊಡೆತ ಭಾರತದ ಷೇರು ಮಾರುಕಟ್ಟೆ ಮೇಲೆ ಆಗಿದೆ.
ಕಳೆದ ಕೆಲವು ವಾರಗಳಿಂದ ಸತತವಾಗಿ ಕುಸಿಯುತ್ತಿರುವ ಷೇರು ಮಾರುಕಟ್ಟೆ ಸೋಮವಾರ ವಹಿವಾಟು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪ್ರಪಾತಕ್ಕೆ ಕುಸಿದಿದೆ. ವಹಿವಾಟು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ 4000 ಅಂಕಗಳಷ್ಟು ಸೆನ್ಸೆಕ್ಸ್ ಕುಸಿತ ಕಂಡಿದೆ. ನಿಫ್ಟಿ 1000 ಅಂಕಗಳಷ್ಟು ಕುಸಿದಿದೆ.
ಷೇರು ಮಾರುಕಟ್ಟೆಯಲ್ಲಿ ಏಷ್ಯಾದ ಷೇರುಗಳು ಪ್ರಮುಖವಾಗಿ ಕುಸಿತ ಕಂಡಿವೆ. ಮುಂದಿನ ಕೆಲವು ದಿನಗಳವರೆಗೆ ಈ ಕುಸಿತ ಮುಂದುವರಿಯಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದೇ ವೇಳೆ ಅಮೆರಿಕದ ಷೇರು ಹೂಡಿಕೆದಾರರಿಗೆ ಇದು ಸುವರ್ಣ ಸಮಯವಾಗಿದ್ದು, ಶೇ.50ರಷ್ಟು ಷೇರುಗಳ ಮೌಲ್ಯ ಹೆಚ್ಚಳಗೊಂಡಿದೆ. ಭಾರತದ ಷೇರುಗಳು ಶೇ.26ರಷ್ಟು ಕುಸಿತ ಕಾಣುತ್ತಿವೆ.ಇದರಲ್ಲಿ ಶೇ.10ರಷ್ಟು ಮೂಲಧನ ಕಡ್ಡಾಯ ಕೂಡ ಸೇರಿದೆ.
ಸೋಮವಾರ ಬೆಳಿಗ್ಗೆ 9 ಗಂಟೆಗೆ ಷೇರು ಮಾರುಕಟ್ಟೆ ತೆರೆದ ಬೆನ್ನಲ್ಲೇ 3,939.8 ಅಂಕಗಳಷ್ಟು ಕುಸಿತ ಕಂಡ ಸೆನ್ಸೆಕ್ಸ್ 71,425.00ರಕ್ಕೆ ಜಾರಿದೆ. ನಿಫ್ಟಿ 1160 ಅಂಕ ಕುಸಿದು 21,743.65ಕ್ಕೆ ಇಳಿಕೆಯಾಗಿದೆ. 10 ಗಂಟೆ ಸುಮಾರಿಗೆ 2700 ಅಂಕಗಳಷ್ಟು ಇಳಿದು 22,000ಗಡಿ ಬಳಿ ಬಂದು ನಿಂತಿತು.
ಭಾರತದ ಈಕ್ವಿಟಿ ಷೇರುಗಳ ಮೌಲ್ಯ ಶೇ.3.5ರಷ್ಟು ಕುಸಿತ ಕಂಡಿವೆ. ರೂಪಾಯಿ ಮೌಲ್ಯ 30 ಪೈಸೆ ಇಳಿಕೆ ಕಂಡು ಅಮೆರಿಕದ ಡಾಲರ್ ಎದುರು 85.74 ರೂ.ಗೆ ತಲುಪಿದೆ.



