Wednesday, May 13, 2026
Google search engine
Homeವಿದೇಶಪಾಕಿಸ್ತಾನದಿಂದ ಹೊರಗೆ 2ನೇ ಹಂತದ ಮಾತುಕತೆಗೆ ಚಿಂತನೆ

ಪಾಕಿಸ್ತಾನದಿಂದ ಹೊರಗೆ 2ನೇ ಹಂತದ ಮಾತುಕತೆಗೆ ಚಿಂತನೆ

ಟೆಹರಾನ್/ ವಾಷಿಂಗ್ಟನ್: ಹರ್ಮುಜ್ ಜಲಸಂಧಿಯ ಮೇಲೆ ಇಂದಿನಿಂದ ಜಾರಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಗಳಿಗೆಯಲ್ಲಿ ಗಡುವು ಮುಂದೂಡಿದ್ದಾರೆ.

ಅಮೆರಿಕ ಮಂಗಳವಾರ ಬೆಳಿಗ್ಗೆ 8 ಗಂಟೆಯೊಳಗೆ ಹರ್ಮುಜ್ ಜಲಸಂಧಿ ಮುಕ್ತಗೊಳಿಸದೇ ಇದ್ದರೆ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಗಡುವು ಮುಗಿಯುವ ಮುನ್ನವೇ ಗಡುವು ವಿಸ್ತರಿಸಲಾಗಿದ್ದು, ನಿರ್ದಿಷ್ಟ ದಿನಾಂಕ ಘೋಷಿಸಿಲ್ಲ.

ಮತ್ತೊಂದೆಡೆ ಹರ್ಮುಜ್ ಜಲಸಂಧಿಯನ್ನು ಕೈವಶ ಮಾಡಿಕೊಳ್ಳಲು ಅಮೆರಿಕ ಭಾರೀ ಪ್ರಮಾಣದ ಸೇನೆಯಲ್ಲಿ ಇರಾನ್ ಕರಾವಳಿ ತೀರದತ್ತ ರವಾನಿಸುತ್ತಿದೆ. 15 ಯುದ್ಧ ನೌಕೆಗಳು, ಎಫ್ 35 ಬಾಂಬರ್ ಸೇರಿದಂತೆ ಹಲವು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಇರಾನ್ ನತ್ತ ಕಳುಹಿಸಲು ಸಮ್ಮತಿಸಿದೆ.

ಇದೇ ಎರಡೂ ದೇಶಗಳು ಮೊದಲ ಸುತ್ತಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿವೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಮೆರಿಕ ಮತ್ತು ಇರಾನ್​​ ನಡುವಿನ ಯುದ್ದ ಒಪ್ಪಂದ ಮಾತುಕತೆ ವಿಫಲವಾಗಿದೆ. ಅಣ್ವಸ್ತ್ರ ಕಾರ್ಯಕ್ರಮ ಕೈಬಿಡಬೇಕು ಎಂಬ ಅಮೆರಿಕದ ಷರತ್ತನ್ನು ಇರಾನ್​ ನಿರಾಕರಿಸಿದ್ದು, ಮಾತುಕತೆ ಮುರಿದು ಬೀಳಲು ಪ್ರಮುಖ ಕಾರಣವಾಗಿದೆ.

ಈ ನಡುವೆ ಮುಂದಿನ ವಾರ ಕದನ ವಿರಾಮ ಮುಕ್ತಾಯಗೊಳ್ಳಲಿದ್ದು, ಅದರೊಳಗೆ ಸಂಘರ್ಷ ಶಮನ ಮಾಡುವ ಗುರಿಯನ್ನು ಎರಡೂ ಕಡೆಯ ನಾಯಕರು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವೈಯಕ್ತಿಕ ಮಾತುಕತೆಗೆ ಮುಂದಾಗಿದ್ದು, ಈ ಬೆಳವಣಿಗೆಯ ಕುರಿತು ಇಬ್ಬರು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಮಾತುಕತೆ ನಡೆಸಿದ ನಿಯೋಗವೇ ಎರಡನೇ ಸುತ್ತಿನ ಮಾತುಕತೆಯಲ್ಲೂ ಭಾಗಿಯಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಸುತ್ತಿನ ಚರ್ಚೆಯ ಸ್ಥಳವಾದ ಇಸ್ಲಾಮಾಬಾದ್ ಅನ್ನು ಮತ್ತೊಮ್ಮೆ ಆತಿಥೇಯ ಸ್ಥಳವಾಗಿ ಮಾಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಇಲ್ಲವೇ ಜಿನಿವಾದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ಇದುವರೆಗೆ ಸ್ಥಳ ಮತ್ತು ಸಮಯವನ್ನು ನಿರ್ದಿಷ್ಟವಾಗಿ ನಿರ್ಧರಿಸಿಲ್ಲ. ಗುರುವಾರ ಮಾತುಕತೆ ನಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕದನ ವಿರಾಮ ಮುಗಿಯುವ ಮುನ್ನ ಮುಂದಿನ ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಸಲು ಪಾಕಿಸ್ತಾನ ಪ್ರಸ್ತಾಪ ಮುಂದಿಟ್ಟಿದೆ ಎಂದು ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಬಿಟ್ಟು ಬೇರೆ ಪ್ರದೇಶದಲ್ಲಿ ಮಾತುಕತೆಗೆ ಪಕ್ಷಗಳು ಮನವಿ ಮಾಡಿವೆ. ಮೊದಲ ಮಾತುಕತೆ ಒಪ್ಪಂದದಲ್ಲಿ ಅಂತ್ಯವಾಗದಿದ್ದರೂ ರಾಜತಾಂತ್ರಿಕ ಪ್ರಕ್ರಿಯೆ ಪ್ರಯತ್ನದ ಭಾಗವಾಗಿದೆ ಎಂದು ಪಾಕ್ ಮೂಲಗಳು ಹೇಳಿವೆ.

ಕದನ ವಿರಾಮ ಒಪ್ಪಂದವನ್ನು ಸಾಧಿಸುವಲ್ಲಿ ಆರಂಭಿಕ ಹಿನ್ನಡೆಯ ಬಳಿಕ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಮೊದಲ ಸುತ್ತಿನ ಮಾತುಕತೆಯಲ್ಲಿ ಸಕಾರಾತ್ಮಕ ಪ್ರಗತಿ ಮಾತ್ರ ಕಂಡಿದ್ದು, ಮಾತುಕತೆ ಮುಗಿದ ಬಳಿಕ ಯಾವುದೇ ನಕಾರಾತ್ಮಕ ಬೆಳವಣಿಗೆ ಆಗಿಲ್ಲ. ಮುಂದಿನ ಸುತ್ತಿನ ಮಾತುಕತೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments