ನ್ಯಾಯಾಂಗ ಸೇವೆಗೆ ಸೇರಬೇಕಾದರೆ ವಕೀಲರಾಗಿ 3 ವರ್ಷ ಅನುಭವ ಪಡೆಯುವುದು ಅಗತ್ಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಮೂರ್ತಿ ಮುಂತಾದ 3 ಹಂತದ ಹುದ್ದೆಗಳನ್ನು ಅಲಂಕರಿಸಬೇಕಾದರೆ ವಕೀಲರಾಗಿ ಮೂರು ವರ್ಷ ಅನುಭವ ಹೊಂದಿರಬೇಕು ಎಂದು ಮಂಗಳವಾರ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ನ್ಯಾಯಮೂರ್ತಿ ಎಜಿ ಮಸಿಹ್ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ನೇತೃತ್ವದ ತ್ರಿಸದಸ್ಯ ಪೀಠ, ನ್ಯಾಯಾಂಗದ ಸೇವೆಯ ಅನುಭವ ಇಲ್ಲದೇ ವಕೀಲರು ನ್ಯಾಯಾಧೀಶರಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಕೀಲ ವೃತ್ತಿಯ ಅನುಭವ ಇಲ್ಲದೇ ನ್ಯಾಯಾಧೀಶರಾಗುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಕನಿಷ್ಠ 3 ವರ್ಷಗಳ ವಕೀಲ ವೃತ್ತಿಯ ಅನುಭವ ಇರಬೇಕು ಎಂದು ಎಲ್ಲಾ ರಾಜ್ಯಗಳು ಅಧಿಸೂಚನೆ ಹೊರಡಿ ಕಾನೂನು ತಿದ್ದುಪಡಿ ಮಾಡಬೇಕು. ಈ ಮೂಲಕ ಕನಿಷ್ಠ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಲು 3 ವರ್ಷ ವಕೀಲ ವೃತ್ತಿ ಕಡ್ಡಾಯ ಮಾಡಿ ಮಾರ್ಗಸೂಚಿ ರೂಪಿಸಿ ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಬಾರ್ ನಲ್ಲಿ 3 ವರ್ಷದ ನೋಂದಣಿ ಆಗಿರಬೇಕು. ಕಾನೂನು ಗುಮಾಸ್ತರಾಗಿ ಸಲ್ಲಿಸಿದ ಸೇವೆಯನ್ನು ಕೂಡ ಪರಿಗಣಿಸಬಹುದಾಗಿದೆ. ನ್ಯಾಯಾಲಯದ ಯಾವುದೇ ಮುಖ್ಯಸ್ಥ ಸ್ಥಾನ ಪಡೆಯಬೇಕಾದರೆ ಕನಿಷ್ಠ 1 ವರ್ಷ ವಕೀಲ ವೃತ್ತಿ ನಡೆಸಿರಬೇಕು. ಕಳೆದ 20 ವರ್ಷಗಳಲ್ಲಿ ಒಂದೇ ಒಂದು ದಿನ ವಕೀಲ ವೃತ್ತಿ ಮಾಡದೇ ಇರುವವರು ನ್ಯಾಯಾಧೀಶರಾಗುತ್ತಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ತೀರ್ಪು ನೀಡುವಾಗ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.



