ಬಳ್ಳಾರಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಅಡ್ಡೆ ಮೇಲೆ ಶುಕ್ರವಾರ ಬೆಳಿಗ್ಗೆ ನಸುಕಿನ ಜಾವ ದಾಳಿ ನಡೆಸಿದ ಅಧಿಕಾರಿಗಳು 523 ಚೀಲ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಳ್ಳಾರಿಯ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಸಹಾಯಕ ಆಯುಕ್ತ ರಾಜೇಶ್ ಹೆಚ್. ಡಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಸಾರ್ವಜನಿಕ ಪಡಿತರ ಅಕ್ಕಿಯನ್ನು ಬಳ್ಳಾರಿ ಮೂಲದ ಪಿಕ್ ಅಪ್ ವಾಹನಗಳ ಮೂಲಕ ಪಡಿತರ ಅಂಗಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿ ಗುಜರಾತ್ ಮೂಲದ ಸರಕು ಲಾರಿಯಲ್ಲಿ ಸಾಗಾಣಿಕೆ ಮಾಡಲು ಸಣ್ಣ ವಾಹನ ದಿಂದ ಲಾರಿಗೆ ತುಂಬುತ್ತಿರುವ ವೇಳೆ ಶುಕ್ರವಾರ ಮುಂಜಾನೆ ಸಹಾಯಕ ಆಯುಕ್ತರು ದಿಢೀರ್ ದಾಳಿ ನಡೆಸಿದರು.
523 ಚೀಲ ಅಕ್ಕಿ, ಲಾರಿ, ಎರಡು ಪಿಕ್ ಅಪ್ ವಾಹನ, ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ, 5 ಅಮಾಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಚಾಲಕ ಮತ್ತು 5 ಅಮಾಲಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಚಾರಣೆ ವೇಳೆ ಸದರಿ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ತಯಾರಿ ಮಾಡುತ್ತಿರುವುದಾಗಿ ಗುಜರಾತ್ ಮೂಲದ ಚಾಲಕ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



