ನಿಗೂಢ ವಸ್ತು ಸ್ಫೋಟಗೊಂಡ ಪರಿಣಾಮ ಶಾಲೆಗೆ ತೆರಳುತ್ತಿದ್ದ 6 ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಸಂಭವಿಸಿದೆ.
ಶನಿವಾರ ಬೆಳಗ್ಗೆ ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಮೋಳಗಿ ಮಾರಯ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಕಳೆದ 6 ತಿಂಗಳಲ್ಲಿ ಸುಮಾರು 5ನೇ ಬಾರಿಗೆ ಇಂತಹ ಸ್ಫೋಟದ ಘಟನೆ ಜರುಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಘಟನಾ ಸ್ಥಳಕ್ಕೆ ಹುಮನಾಬಾದ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಸೋಕೋ ತಂಡವೂ ಆಗಮಿಸಿ ಸ್ಫೋಟದ ವಸ್ತುಗಳ ಮಾದರಿ ಸಂಗ್ರಹಿಸಲಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತನಿಖೆಗೆ ಈಶ್ವರ ಖಂಡ್ರೆ ಆದೇಶ
ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟದಿಂದ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ, ತನಿಖೆಗೆ ಆದೇಶಿಸಿದ್ದಾರೆ.
ಕೂಡಲೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮತ್ತು ಚಿಕಿತ್ಸಾವೆಚ್ಚ ಭರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿರುವ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸ್ಫೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ.
ಸ್ಫೋಟಕ್ಕೆ ಕಾರಣವೇನು, ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು, ಆ ಸ್ಫೋಟಕ ವಸ್ತು ಅಲ್ಲಿಗೆ ಹೇಗೆ ಬಂತು, ಯಾವ ಉದ್ದೇಶಕ್ಕೆ ಅದು ಬಳಕೆಯಾಗುತ್ತಿದ್ದು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲು ಈಶ್ವರ ಖಂಡ್ರೆ ಸೂಚಿಸಿದ್ದಾರೆ.



