Monday, May 25, 2026
Google search engine
Homeರಾಜ್ಯಶೇ.90ರಷ್ಟು ಋಷಿಗಳು ಬ್ರಾಹ್ಮಣರಲ್ಲ: ಅನಂತ್ ಕುಮಾರ್ ಹೆಗಡೆ

ಶೇ.90ರಷ್ಟು ಋಷಿಗಳು ಬ್ರಾಹ್ಮಣರಲ್ಲ: ಅನಂತ್ ಕುಮಾರ್ ಹೆಗಡೆ

ಕಾರವಾರ: ಶೇಕಡಾ 90ರಷ್ಟು ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರ ಬ್ರಾಹ್ಮಣರಲ್ಲ. ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆಯಿರಲಿಲ್ಲ, ಯೋಗ್ಯತೆಗೆ ಮಾತ್ರ ಬೆಲೆಯಿತ್ತು. ಇಂದು ಜಾತಿಗೆ ಬೆಲೆ ಕೊಟ್ಟಿದ್ದು ನಮ್ಮಂತಹ ಬುದ್ಧಿವಂತರು. ಇತಿಹಾಸ ಓದಿದರೆ ಸತ್ಯ ತಿಳಿಯುತ್ತದೆ ಎಂದು ಮಾಜಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ ಬಳಿಕ ಮೌನಕ್ಕೆ ಶರಣಾಗಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಎರಡು ವರ್ಷಗಳ ಬಳಿಕ ಭಾನುವಾರ ಭಟ್ಕಳದ ಹಳೆ ಬಸ್ ನಿಲ್ದಾಣದ ಬಳಿ ನಡೆದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಅವರು ತಮ್ಮ ಎಂದಿನ ಶೈಲಿಯಲ್ಲೇ ಮಾತನಾಡಿದ್ದಾರೆ.

ನಮ್ಮನ್ನು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಸೋಲಿಸಿಲ್ಲ. ಹಿಂದೂಗಳನ್ನು ಸೋಲಿಸಿದ್ದು ನಮ್ಮವರೇ ಆದ ಜಯಚಂದ ಮತ್ತು ಮಲ್ಲಪ್ಪ ಶೆಟ್ಟಿಯಂತಹ ದ್ರೋಹಿಗಳು. ನಾವು ಒಂದಾಗದಿದ್ದರೆ ನಮ್ಮ ಪರಿಸ್ಥಿತಿ ‘ಗೋವಿಂದ ಗೋವಿಂದ’ ಆಗಲಿದೆ” ಎಂದು ಎಚ್ಚರಿಸಿದರು.

ಜಾತ್ಯತೀತತೆ ಎಂದರೆ ಅದು ಹಿಂದುತ್ವ. ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲು ಅವಕಾಶ ನೀಡಿದ್ದೇವೆ ಎಂದರೆ ನಮಗಿಂತ ದೊಡ್ಡ ಜಾತ್ಯತೀತರು ಯಾರಿದ್ದಾರೆ? ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯತೀತತೆಯ ಪಾಠ ಮಾಡಿ ಎಂದು ಅವರು ಸವಾಲು ಹಾಕಿದರು.

ಆರ್.ಎಸ್.ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಹುಲಿ-ಸಿಂಹವನ್ನು ಯಾರೂ ದೇವರಿಗೆ ಬಲಿ ಕೊಡಲ್ಲ, ಕುರಿಯನ್ನಷ್ಟೇ ಬಲಿ ಕೊಡುವುದು ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಇಂದು ಆಫ್ರಿಕಾದಲ್ಲಿ ನಮಗಿಂತ ಸುಂದರವಾಗಿ ಗಣೇಶ ಹಬ್ಬ ಆಚರಿಸುತ್ತಾರೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯರಿಗೆ ಅಪಾರ ಗೌರವವಿದೆ. ಜಗತ್ತು ನಮ್ಮತ್ತ ನೋಡುತ್ತಿದೆ, ನಾವಿಂದು ಎದ್ದು ನಿಲ್ಲಬೇಕಿದೆ” ಎಂದರು.

ಶಿಕ್ಷಣ ಕೇವಲ ದುಡ್ಡು ಮಾಡುವುದಕ್ಕಷ್ಟೇ ಎಂಬಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸಂಸ್ಕಾರಯುತ ಬದುಕಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments