ಮುಂಬೈ- ಅಹಮದಾಬಾದ್ ನಡುವೆ ಸಂಚರಿಸಲಿರುವ ಬುಲೆಟ್ ಟ್ರೈನ್ ಗಾಗಿ ಕಾಮಗಾರಿ ವೇಳೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ.
ಮಂಗಳವಾರ ಸಂಜೆ ಆನಂದ್ ಜಿಲ್ಲೆಯ ವಾಸದ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬುಲೆಟ್ ಟ್ರೈನ್ ಗಾಗಿ ನಿರ್ಮಿಸಲಾಗುತ್ತಿದ್ದ ಸೇತುವೆ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ವಡೋದರಾ ಬಳಿಯ ಮಹಿ ನದಿಯ ಮೇಲೆ ಸೇತುವೆ ನಿರ್ಮಾಣಕ್ಕಾಗಿ ಕಬ್ಬಿಣ ಹಾಗೂ ಕಾಂಕ್ರಿಟ್ ಬ್ಲಾಕ್ ಗಳನ್ನು ಬಳಸಿ ಬಾವಿಯಲ್ಲಿ ತಾತ್ಕಾಲಿಕ ಅಡಿಪಾಯ ಕುಸಿದಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.