ಕಂಪ್ಯೂಟರ್ ಆಪರೇಟರ್ ಕೆಲಸದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಚಾಕುವಿನಿಂದ ತನ್ನ ನಾಲ್ಕು ಬೆರಳನ್ನು ಕತ್ತರಿಸಿಕೊಂಡ ವಿಲಕ್ಷಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಸಂಬಂಧಿಕರೊಬ್ಬರ ವಜ್ರದ ಕಂಪನಿಯಲ್ಲಿ ಸಿಕ್ಕಿದ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಲು ಇಚ್ಛಿಸದ 32 ವರ್ಷದ ಮಯೂರ್ ತಾರಾಪರಾ ಎಂಬಾತ ತನ್ನ ಎಡಗೈನ 4 ಬೆರಳು ಕತ್ತರಿಸಿಕೊಂಡಿದ್ದಾನೆ.
ತನ್ನ ಕೈನ ಬೆರಳು ಕತ್ತರಿಸಿಕೊಂಡ ಮಯೂರ್ ಪ್ರಜ್ಞೆ ತಪ್ಪಿ ಬಿದ್ದಾಗ ನನ್ನ 4 ಬೆರಳು ನಾಪತ್ತೆಯಾಗಿದ್ದವು ಎಂದು ಪೊಲೀಸರ ಬಳಿ ಕತೆ ಕಟ್ಟಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರು ವಿಷಯ ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ.
ವರಚಾ ಮಿನಿ ಬಜಾರ್ ನಲ್ಲಿರುವ ಅನಭ್ ಜೆಮ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಇಷ್ಟವಿಲ್ಲ ಎಂದು ಮನೆಯವರ ಬಳಿ ಹೇಳಲು ಧೈರ್ಯ ಸಾಲದೇ ಮಯೂರು ವಿಲಕ್ಷಣ ತೀರ್ಮಾನ ಕೈಗೊಂಡಿದ್ದಾನೆ.
ಕಂಪನಿಯ ಅಕೌಂಟ್ಸ್ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮಯೂರ್ ಕೈ ಬೆರಳುಗಳು ಇದ್ದರೆ ತಾನೇ ಈ ಕೆಲಸ ಮಾಡುವುದು? ಅದೇ ಇಲ್ಲದಿದ್ದರೆ ಹೇಗೆ ಎಂದು ಯೋಚಿಸಿದ್ದಾನೆ. ಡಿಸೆಂಬರ್ 8ರಂದು ದ್ವಿಚಕ್ರವಾಹನದಲ್ಲಿ ಸ್ನೇಹಿತರೊಬ್ಬರ ಮನೆಗೆ ತೆರಳುತ್ತಿದ್ದಾಗ ಅಮ್ರೋಲಿಯ ವೇದಾಂತ ವೃತ್ತದ ಬಳಿ ರಿಂಗ್ ರೋಡ್‌ನಲ್ಲಿ ತಲೆ ಸುತ್ತು ಬಂದು ಬಿದ್ದು ಹೋಗಿದ್ದಾಗಿ ಹೇಳಿದ್ದಾನೆ.
10 ನಿಮಿಷದ ನಂತರ ಪ್ರಜ್ಞೆ ಬಂದಾಗ ಎಡಗೈಯ ನಾಲ್ಕು ಬೆರಳುಗಳು ತುಂಡಾಗಿದ್ದವು ಎಂದು ಮಯೂರ್ ಪೊಲೀಸರಿಗೆ ತಿಳಿಸಿದ್ದಾರೆ. ಯಾರೋ ದುಷ್ಕರ್ಮಿಗಳು ಮಾಟಮಂತ್ರಕ್ಕಾಗಿ ಬೆರಳುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿರಬಹುದು ಎಂದು ಶಂಕಿಸಿ ತನಿಖೆ ನಡೆಸಿದ್ದಾರೆ.
ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆಯನ್ನು ನಗರದ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ನಂತರ ಅಪಘಾತ ನಡೆದ ಜಾಗದ ಬಳಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ತಾಂತ್ರಿಕ ಕಣ್ಗಾವಲು ಹಾಗೂ ಮಾನವನ ಬುದ್ಧಿಮತ್ತೆಯನ್ನು ನಿಯೋಜಿಸಿದ ನಂತರ ಕಥೆ ನಿಜ ವಿಷಯ ಬೆಳಕಿಗೆ ಬಂದಿದೆ.
ಸಿಂಗನ್‌ಪೋರ್‌ನ ಚಾರ್ ರಸ್ತಾ ಬಳಿಯ ಅಂಗಡಿಯೊಂದರಲ್ಲಿ ಚಾಕು ಖರೀದಿಸಿದ್ದ ಮಯೂರ್, 4 ದಿನಗಳ ನಂತರ ಭಾನುವಾರ ರಾತ್ರಿ ಅಮ್ರೋಲಿ ರಿಂಗ್ ರೋಡ್‌ಗೆ ಹೋಗಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ರಾತ್ರಿ 10 ಗಂಟೆ ಸುಮಾರಿಗೆ ಚಾಕುವಿನಿಂದ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದಾನೆ. ನಂತರ ಮೊಣಕೈ ಬಳಿ ಹಗ್ಗ ಕಟ್ಟಿ ರಕ್ತದ ಹರಿವು ತಡೆಯಲು ಚಾಕು ಮತ್ತು ಬೆರಳುಗಳನ್ನು ಚೀಲದಲ್ಲಿ ಹಾಕಿ ಎಸೆದಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.