Home ಜಿಲ್ಲಾ ಸುದ್ದಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆಜೆ ಜಾರ್ಜ್

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆಜೆ ಜಾರ್ಜ್

ಬೇಸಿಗೆಯಲ್ಲಿ ಗರಿಷ್ಟ 19,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ನಿರೀಕ್ಷಿಸಲಾಗಿದ್ದು, ಅದನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಸದ್ಯಕ್ಕೆ ಲೋಡ್ ಶೆಡಿಂಗ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

by Editor
0 comments
kj george

ದೊಡ್ಡಬಳ್ಳಾಪುರ: ಮುಂಬರುವ ಬೇಸಿಗೆಯಲ್ಲಿ ಗರಿಷ್ಟ 19,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ನಿರೀಕ್ಷಿಸಲಾಗಿದ್ದು, ಅದನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಸದ್ಯಕ್ಕೆ ಲೋಡ್ ಶೆಡಿಂಗ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಇಂಧನ ಇಲಾಖೆಗೆ ಸಂಬಂಧಿಸಿದಂತೆ ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಅಗತ್ಯವಿರುವ ವಿದ್ಯುತ್ ಪೂರೈಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕಳೆದ ಬೇಸಿಗೆಯಲ್ಲಿ 17,000 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ಬಂದಿತ್ತು. ಅದರಂತೆ ಮುಬರುವ ಬೇಸಿಗೆಯಲ್ಲಿ ಎಷ್ಟು ವಿದ್ಯುತ್ ಬೇಕಾಗಬಹುದು ಎಂಬ ಬಗ್ಗೆ ಕೃತಕ ಬುದ್ಧಿಮತ್ತೆ (ಐಎ) ತಂತ್ರಜ್ಞಾನ ಬಳಸಿಕೊಂಡು ಕೆಪಿಟಿಸಿಎಲ್, ಪಿಸಿಕೆಎಲ್ ಮತ್ತು ಎಸ್ ಎಲ್ ಡಿಸಿ ವತಿಯಿಂದ ನಡೆಸಿದ ಸಮೀಕ್ಷೆ ಪ್ರಕಾರ ಗರಿಷ್ಠ ಬೇಡಿಕೆ ಅವಧಿಯಲ್ಲಿ 19,000 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಅದರಂತೆ ಅಗತ್ಯ ವಿದ್ಯುತ್ ಪೂರೈಸಲು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದದ ಮೂಲಕ ಹೆಚ್ಚುವರಿ ಅಗತ್ಯವಿರುವ ವಿದ್ಯುತ್ಅನ್ನು ಕಡಿಮೆ ದರಕ್ಕೆ ಖರೀದಿಸಲು ಅನ್ಯ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಲೋಡ್ ಶೆಡಿಂಗ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದರು.

banner

ಜಿಲ್ಲೆಯಲ್ಲಿ ಅಗತ್ಯ ವಿದ್ಯುತ್ ಪೂರೈಕೆಗೆ ಕ್ರಮ:
ಇದಕ್ಕೂ ಮುನ್ನ ಪರಿಶೀಲನಾ ಸಭೆಯಲ್ಲಿ ಮತನಾಡಿದ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೃಷಿ ಚಟುವಟಿಕೆ ಜತೆಗೆ ಕೈಗಾರಿಕೆಗಳಿಗೂ ಸಮರ್ಪಕ ವಿದ್ಯುತ್ ಪೂರೈಸಬೇಕಾಗಿದ. ಹೀಗಾಗಿ ಸುಗಮ ವಿದ್ಯುತ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಫೀಡರ್ ಗಳು, ಟ್ರಾನ್ಸ್ ಫಾರ್ಮರ್ ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಫೀಡರ್ ಮಟ್ಟದ ಸೌರೀಕರಣದ ಮೂಲಕ ರೈತ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ಕುಸುಮ್- ಸಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಬೇಸಿಗೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಈ ಫೀಡರ್ ಮಟ್ಟದ ಸೌರೀಕರಣ ಕಾಮಗಾರಿಯನ್ನು ಎಲ್ಲಾ ಕಡೆ ಏಕಕಾಲದಲ್ಲಿ ಕೈಗೊಂಡು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಬೇಕು ಎಂದು ಅನುಷ್ಟಾನ ಏಜನ್ಸಿಗಳಿಗೆ ಸಚಿವರು ಸೂಚನೆ ನೀಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೃಷಿ ಪಂಪ್ ಸೆಟ್ ಗಳ ಅಕ್ರಮ- ಸಕ್ರಮ ಯೋಜನೆಯಡಿ 4.5 ಲಕ್ಷ ಅರ್ಜಿಗಳು ಬಾಕಿ ಇದ್ದವು. ಕಳೆದ ಒಂದೂವರೆ ವರ್ಷದಲ್ಲಿ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಇನ್ನುಳಿದ ಪಂಪ್ ಸೆಟ್ ಗಳನ್ನು ಮುಂದಿನ ಒಂದು ವರ್ಷದೊಳಗೆ ಸಕ್ರಮಗೊಳಿಸಲಾಗುವುದು. ವಿದ್ಯುತ್ ಫೀಡರ್ ಗಳಿಂದ 500 ಮೀಟರ್ ಗಿಂತ ಹೆಚ್ಚು ದೂರದಲ್ಲಿರುವ ಪಂಪ್ ಸೆಟ್ ಗಳನ್ನು ಸೌರೀಕರಣಗೊಳಿಸಲು ಆದ್ಯತೆ ನೀಡಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಸಬ್ಸಿಡಿಯನ್ನು ಶ. 50ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರಶೇ. 30ರಷ್ಟು ಸಬ್ಸಿಡಿ ನೀಡುತ್ತಿದ್ದು, ರೈತರು ಶೇ. 20ರಷ್ಟು ಮೊತ್ತ ಭರಿಸಿದರೆ ಸಾಕು ಎಂದರು.

ಟ್ರಾನ್ಸ್ ಫಾರ್ಮರ್ ಗಳಲ್ಲಿ ಸಮಸ್ಯೆ ಉದ್ಭವವಾದರೆ ತಕ್ಷಣ ಅದನ್ನು ಬದಲಾಯಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 213 ಟ್ರಾನ್ಸ್ ಫಾರ್ಮರ್ ಗಳು ಲಭ್ಯವಿದೆ. ಜತೆಗೆ ವಿದ್ಯುತ್ ಕಂಬಗಳು, ಕಂಡಕ್ಟರ್ ಗಳನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ ಎಂದರು.

ನಲಮಂಗಲ ನಗರದಲ್ಲಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಅಳವಡಿಸಬೇಕು ಎಂಬ ಶಾಸಕ ಎನ್.ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೊಸಕೋಟೆ ತಾಲೂಕಿನಲ್ಲಿ ಕುಸುಮ್-ಸಿ ಯೋಜನೆಯಡಿ ಕೆರೆಗಳ ಅಂಗಳಗಳಲ್ಲಿ ನಡೆಯುತ್ತಿರುವ ಫೀಡರ್ ಸೌರೀಕರಣ ಕಾಮಗಾರಿಗಳನ್ನು ತ್ವರಿತವಗಿ ಪೂರ್ಣಗೊಳಿಸೇಕು ಎಂಬ ಶಾಸಕ ಶರತ್ ಬಚ್ಚೇಗೌಡ ಅವರ ಮನವಿಗೆ ಪ್ರತಿಕ್ರಿಯಿಸಿ, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಬೆಂಗಳೂರು ಗ್ರಮಾಂತರ ಜಿಲ್ಲಾ ಉಸ್ತುವಾರಿಯೂ ಆಗಿರುವ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಶರತ್ ಬಚ್ಚೇಗೌಡ, ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಬಯಪಾ ಅಧ್ಯಕ್ಷ ಶಾಂತಕುಮಾರ್, ಗ್ಯಾರಂಟಿಗಳ ಅನುಷ್ಟಾನ ಸಮಿತಿ ಅಧ್ಯಕ್ಷ ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಜ.11ರಿಂದ 3 ದಿನ ಅಯೋಧ್ಯೆ ರಾಮಮಂದಿರ ವಾರ್ಷಿಕೋತ್ಸವ: 100 ಗಣ್ಯರಿಗೆ ಆಹ್ವಾನ ಗ್ರಾಹಕರ ದೂರು ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಬ್ಯಾಂಕ್ ಗೆ ಬೀಳುತ್ತೆ ದಂಡ! SHOCKING: 69 ಉಗ್ರರಿರುವ ಜೈಲಿನಲ್ಲಿ ಹಾರಾಡಿದ ಡ್ರೋಣ್: 8 ದಿನಗಳ ನಂತರ ಪತ್ತೆ! 2 ಲಕ್ಷ ಬ್ಯಾಂಕ್ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಐ! ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಯುವತಿ ಕೊಲೆಗೈದ ಸಹದ್ಯೋಗಿ: ರಕ್ಷಿಸಲು ಬಾರದ ಜನ! ಮದ್ಯಪ್ರಿಯರಿಗೆ ಬಿಗ್ ಶಾಕ್: ಬಿಯರ್ ಬೆಲೆ ಸದ್ದಿಲ್ಲದೇ ಏರಿಕೆ! 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ನೇಮಕ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆಜೆ ಜಾರ್ಜ್ ಶರಣಾಗಿದ್ದ 6 ನಕ್ಸಲರಿಗೆ ಜ.30ರವರೆಗೆ ನ್ಯಾಯಾಂಗ ಬಂಧನ ಲಾಜ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿಗೆ 5 ಮಂದಿ ಬಲಿ: ಊರು ಬಿಟ್ಟ 1,00,00 ಜನ!