ಇರಾನ್ ನ ಪ್ರಮುಖ ಬಂದರಿನಲ್ಲಿ ಸಂಭವಿಸಿದ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇರಾನ್ ನ ಅತ್ಯಾಧುನಿಕ ಶಾಹಿದ್ ರಾಜೀ ಬಂದರು ಡಾಕ್ನ ಒಂದು ಭಾಗದಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಹಲವಾರು ಕಂಟೇನರ್ ಗಳು ಬೆಂಕಿಗೆ ಆಹುತಿಯಾಗಿದೆ.
ಗಾಳಿ ಬಲವಾಗಿ ಬೀಸುತ್ತಿರುವ ಕಾರಣ ದಟ್ಟವಾದ ಹೊಗೆ ಸಮೀಪದ ಕಟ್ಟಡ ಹಾಗೂ ಶಾಲೆಗಳಿಗೂ ಆವರಿಸಿಕೊಂಡಿದ್ದು, ಉಸಿರುಗಟ್ಟಿ ಹಲವು ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿ ಟೆಹ್ರಾನ್ನಿಂದ ದಕ್ಷಿಣಕ್ಕೆ 1000 ಕಿಲೋಮೀಟರ್ ದೂರದಲ್ಲಿರುವ ಶಾಹಿದ್ ರಾಜೀ, ಇರಾನ್ನ ಅತ್ಯಾಧುನಿಕ ಕಂಟೇನರ್ ಬಂದರಾಗಿದ್ದು, ಹಾರ್ಮೋಜ್ಗನ್ ಪ್ರಾಂತೀಯ ರಾಜಧಾನಿ ಬಂದರ್ ಅಬ್ಬಾಸ್ನಿಂದ ಪಶ್ಚಿಮಕ್ಕೆ 23 ಕಿ.ಮೀ. ದೂರದಲ್ಲಿದೆ ಮತ್ತು ವಿಶ್ವದ ತೈಲ ಉತ್ಪಾದನೆಯ ಐದನೇ ಒಂದು ಭಾಗ ಹಾದುಹೋಗುವ ಹಾರ್ಮೋಜ್ ಜಲಸಂಧಿಯ ಉತ್ತರಕ್ಕೆ ಇದೆ.
ದಟ್ಟವಾದ ಹೊಗೆ ಹಾಗೂ ಬಲವಾಗಿ ಬೀಸುತ್ತಿರುವ ಗಾಳಿಯಿಂದ ಸುಮಾರು 20 ಕಿ.ಮೀ.ದೂರದವರೆಗೂ ವ್ಯಾಪಿಸಿದೆ. ಇದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದೇವೆ. “ಸ್ಫೋಟದ ನಂತರ ನಾಲ್ಕು ಕ್ಷಿಪ್ರ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹಾರ್ಮೋಜ್ಗನ್ ರೆಡ್ ಕ್ರೆಸೆಂಟ್ ಸೊಸೈಟಿ ಮುಖ್ಯಸ್ಥ ಮೊಖ್ತರ್ ಸಲಾಹ್ಶೌರ್ ತಿಳಿಸಿದ್ದಾರೆ.



