ಪಾಕಿಸ್ತಾನದ 70ಕ್ಕೂ ಹೆಚ್ಚು ಡ್ರೋಣ್ ಗಳನ್ನು ಹೊಡೆದುರುಳಿಸಲಾಗಿದ್ದು, 35ರಿಂದ 45 ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನಾ ಕಾರ್ಯಾಚರಣೆ ಮುಖ್ಯಸ್ಥ ಡೈರಕ್ಟರ್ ಜನರಲ್ ಲೆಫ್ಟಿನೆಂಟ್ ರಾಜೀವ್ ಘಾಯ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ದಿನಗಳ ಕಾಲ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿಲ್ಲ. ಬದಲಾಗಿ ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸ ಮಾಡುವ ಮೂಲಕ ಅಪಾರ ಹಾನಿಯುಂಟು ಮಾಡಿದ್ದೇವೆ ಎಂದರು.
ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಿಖರ ದಾಳಿ ನಡೆಸುವ ಮೂಲಕ ಯಶಸ್ಸು ಸಾಧಿಸಿದ್ದೇವೆ. ದಾಳಿಯ ವೇಳೆ ಭಾರತದ ಯಾವೊಬ್ಬ ಪೈಲೆಟ್ ಸಿಕ್ಕಿಬಿದ್ದಿರುವುದು ಹಾಗೂ ಹುತಾತ್ಮ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೇ 7ರಿಂದ 10ನೇ ತಾರೀಖಿನವರೆಗೆ ದಾಳಿ- ಪ್ರತಿದಾಳಿ ನಡೆದಿದ್ದು, ಭಾರತದ 5 ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಸಣ್ಣ ಪ್ರಮಾಣದ ಆರ್ಟಿಲರಿ ಗನ್ ಗಳನ್ನು ಬಳಸಿ ಶೆಲ್ ದಾಳಿ ನಡೆಸಿದೆ. ಪಾಕಿಸ್ತಾನದ ಬಹುತೇಕ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಇದರಿಂದ ಪಾಕಿಸ್ತಾನದ ಯಾವುದೇ ತಂತ್ರ ನಡೆಯಲಿಲ್ಲ ಎಂದು ಅವರು ಹೇಳಿದರು
