ಬೆಂಗಳೂರು: ಆರ್‍ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರ ಸಾವಿನ ಕುರಿತು ಕಾರ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಮತ್ತು ಮೃತರಿಗೆ ಕನಿಷ್ಠ 50 ಲಕ್ಷ ಪರಿಹಾರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಂತದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಹೇಳಿದರು.
ತೆಲಂಗಾಣದಲ್ಲಿ ಈಚೆಗೆ ಅಲ್ಲು ಅರ್ಜುನ್ ಅವರ ಸಿನಿಮಾ ಬಿಡುಗಡೆ ವೇಳೆ ತುಳಿತಕ್ಕೆ ಒಳಗಾಗಿ ಸಾವು ನೋವಾಗಿತ್ತು. ಅಲ್ಲಿ ಕೂಡ ಕಾಂಗ್ರೆಸ್ ಸರಕಾರ ಇತ್ತು. ಅಲ್ಲು ಅರ್ಜುನ್ ಅವರನ್ನು ಬಂಧಿಸಲಿಲ್ಲವೇ ಎಂದು ಕೇಳಿದರು.
ನಿನ್ನೆಯ ದುರ್ಘಟನೆಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಲಂಡನ್‍ನಲ್ಲೋ, ದುಬೈನಲ್ಲೋ ಇರುವ ಆರ್‍ಸಿಬಿ ಮಾಲೀಕರು ಕೂಡ ಇದಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು. ಕೇರಳದಲ್ಲಿ ಆನೆ ತುಳಿತದಿಂದ ಸಾವಾದರೆ ಆನೆ ಕರ್ನಾಟಕದ್ದು ಎಂದು 25 ಲಕ್ಷ ಪರಿಹಾರ ಘೋಷಿಸಿದ್ದರು ಎಂದು ಗಮನ ಸೆಳೆದರು.
ಒಬ್ಬ ಮ್ಯಾಜಿಸ್ಟ್ರೇಟ್ ರಿಂದ ತನಿಖೆ ನಡೆದರೆ ಅಪರಾಧಿ ಸ್ಥಾನದಲ್ಲಿ ಇರುವ ಮುಖ್ಯಮಂತ್ರಿಗಳು, ಮಂತ್ರಿಮಂಡಲದ ಸದಸ್ಯರನ್ನು ತನಿಖೆ ಮಾಡಲಾಗದು ಎಂದು ನುಡಿದರು. ಮುಖ್ಯಮಂತ್ರಿಗಳು ಒಬ್ಬ ಮ್ಯಾಜಿಸ್ಟ್ರೇಟ್ ರಿಂದ ತನಿಖೆಗೆ ಆದೇಶಿಸಿದ್ದಾರೆ. ಅದರ ಅರ್ಥ ಏನು ಎಂದು ಕೇಳಿದರು. ವೈಫಲ್ಯಕ್ಕೆ ಹೊಣೆ ಹೊರಲು ಸರಕಾರ ಸಿದ್ಧವಿಲ್ಲ. ಇವರಿಗೆ ಜನಪರ ಕಾಳಜಿ ಬದಲು ಪ್ರಚಾರದ ಹುಚ್ಚೇ ಪ್ರಮುಖವೆನಿಸಿದೆ ಎಂದು ಟೀಕಿಸಿದರು.
ಆರ್‍ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ 13 ವರ್ಷದ ಬಾಲಕನೂ ಸೇರಿ 11 ಜನರು ಮೃತಪಟ್ಟಿದ್ದಾರೆ. ರಾಜ್ಯ ಸರಕಾರವು ಇಷ್ಟೊಂದು ಆತುರಾತುರವಾಗಿ ಈ ಸಂಭ್ರಮಾಚರಣೆಯನ್ನು ಯಾಕೆ ಆಯೋಜಿಸಿತ್ತು? ಬೇರೆ ಯಾರಾದರೂ ಆಯೋಜಿಸಿದ್ದರೆ ಸರಕಾರ ಅನುಮತಿ ಕೊಟ್ಟದ್ದೇಕೆ? ಪೂರ್ವತಯಾರಿ ಇಲ್ಲದೇ ನಿನ್ನೆಯೇ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ ಎಂದು ಕೇಳಿದರು.


