ಇರಾನ್ ವಿರುದ್ಧ ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಇಸ್ರೇಲ್ ಇದೀಗ ಪ್ರಮುಖ ಶಸ್ತ್ರಾಸ್ತ್ರಗಳ ಕೊರತೆ ಎದುರಿಸುವಂತಾಗಿದ್ದು, ಯುದ್ಧದ ತಂತ್ರಗಳನ್ನು ಬದಲಿಸುವ ಜೊತೆಗೆ ನೆರವಿಗಾಗಿ ಅಮೆರಿಕ ಕಡೆ ನೋಡುವಂತಾಗಿದೆ.
ಇರಾನ್ ಮತ್ತು ಇಸ್ರೇನ್ ನಡುವಣ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದ್ದು, ಇದೇ ರೀತಿ ಯುದ್ಧ ಮುಂದುವರಿದರೆ ಇಸ್ರೇಲ್ ಬಳಿ ದೂರಗಾಗಿ ಕ್ಷಿಪಣಿಗಳ ಸಂಗ್ರಹ 10ರಿಂದ 12 ದಿನದಲ್ಲಿ ಮುಗಿದು ಹೋಗಲಿದೆ. ಈಗಾಗಲೇ 3000 ಕೋಟಿಗೂ ಅಧಿಕ ಮೊತ್ತವನ್ನು ಯುದ್ಧದಿಂದ ಕಳೆದುಕೊಂಡಿರುವ ಇಸ್ರೇಲ್ ಎಚ್ಚರಿಕೆಯಿಂದ ಶಸ್ತ್ರಾಸ್ತ್ರಗಳನ್ನು ಬಳಸಲು ಚಿಂತನೆ ನಡೆಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ಇಸ್ರೇಲ್ ಶಸ್ತ್ರಾಸ್ತ್ರ ಸಂಗ್ರಹಗಳ ಬಗ್ಗೆ ವರದಿ ಮಾಡಿದ್ದು, ಇಸ್ರೇಲ್ ಬಳಿ ದೀರ್ಘ ಶ್ರೇಣಿಯ ಕ್ಷಿಪಣಿ ಪ್ರತಿಬಂಧಕಗಳ ಪೂರೈಕೆಯ ವೇಗ ಕಡಿಮೆ ಮಾಡಿದೆ. ಎರಡೂ ದೇಶಗಳು ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿರುವುದರಿಂದ ಇಸ್ರೇಲ್ ಬಳಿ ಕ್ಷಿಪಣಿ ನಿರೋಧಕ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಭಾರೀ ಕಡಿಮೆ ಆಗಿದೆ.
ಇರಾನ್ ಪಡೆಗಳು ಸುಮಾರು 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿ ಬಿಟ್ಟಿವೆ. ಸುಮಾರು 2000 ಕಿ.ಮೀ. ದೂರ ಚಿಮ್ಮುವ ಸೂಪರ್ ಸಾನಿಕ್ ಕ್ಷಿಪಣಿಗಳನ್ನು ಬಳಸಿ ಸುಮಾರು 40 ನಗರಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ.
ಇಸ್ರೇಲ್ ಪಡೆಗಳು ಕ್ಷಿಪಣಿಗಳ ದಾಳಿಯನ್ನು ಹಿಮ್ಮೆಟ್ಟಿಸಬಲ್ಲ ಡೂಮ್ ಗಳು ಯಶಸ್ವಿಯಾಗಿ ಕಾರ್ಯಚರಿಸುತ್ತಿದ್ದು, ಸಾಕಷ್ಟು ದಾಳಿಯನ್ನು ವಿಫಲಗೊಳಿಸಿದೆ. ಇದರ ಹೊರತಾಗಿಯೂ ಸಾಕಷ್ಟು ಕ್ಷಿಪಣಿಗಳ ದಾಳಿಯಿಂದ 24 ಮಂದಿ ಮೃತಪಟ್ಟಿದ್ದು, 1300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ 19000 ಕಟ್ಟಗಳಿಗೆ ಹಾನಿಯಾಗಿದ್ದು, 3000 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಟೆಲ್ ಅವಿವ್ನಲ್ಲಿರುವ ಅಧಿಕಾರಿಗಳು ಇರಾನ್ನ ಕ್ಷಿಪಣಿ ಉಡಾವಣಾ ಯಂತ್ರಗಳಲ್ಲಿ 3ನೇ ಒಂದು ಭಾಗವನ್ನು ನಾಶಪಡಿಸಲಾಗಿದೆ ಮತ್ತು ಇರಾನ್ ನಡೆಸಿದ ವಾಯು ದಾಳಿಯಲ್ಲಿ ಮೇಲುಗೈ ಸಾಧಿಸಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ ಇರಾನ್ ತನ್ನ ಸಂಗ್ರಹದಲ್ಲಿರುವ ಒಟ್ಟಾರೆ ಶಸ್ತ್ರಾಸ್ತ್ರಗಳ ಪೈಕಿ ಕೇವಲ ಅರ್ಧಕ್ಕಿಂತ ಕಡಿಮೆ ಬಳಕೆ ಮಾಡಿದೆ. ಅಲ್ಲದೇ ಹೆಚ್ಚು ಕ್ಷಿಪಣಿ ದಾಸ್ತಾನು ಭೂಗರ್ಭದಲ್ಲಿ ಅಡಗಿಸಿಟ್ಟಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್, ದಿ ಆರೋ ಸಿಸ್ಟಮ್ ಮತ್ತು ಯುಎಸ್ ಸರಬರಾಜು ಮಾಡಿದ ಪೇಟ್ರಿಯಾಟ್ಸ್ ಮತ್ತು ಥಾಡ್ ಬ್ಯಾಟರಿಗಳನ್ನು ಒಳಗೊಂಡಿರುವ ಇಸ್ರೇಲ್ನ ಲೇಯರ್ಡ್ ಕ್ಷಿಪಣಿ ರಕ್ಷಣೆಯನ್ನು ನಿರ್ವಹಿಸುವ ವೆಚ್ಚವು ನಿರ್ಣಾಯಕ ಕಳವಳಕಾರಿಯಾಗಿದೆ.
ಇಸ್ರೇಲಿ ಹಣಕಾಸು ದಿನಪತ್ರಿಕೆ ದಿ ಮಾರ್ಕರ್ ರಾತ್ರಿಯ ಕ್ಷಿಪಣಿ ರಕ್ಷಣಾ ಕಾರ್ಯಾಚರಣೆಗಳಿಗೆ 1 ಬಿಲಿಯನ್ ಶೆಕೆಲ್ಗಳವರೆಗೆ ($285 ಮಿಲಿಯನ್) ವೆಚ್ಚವಾಗುತ್ತಿದೆ ಎಂದು ಅಂದಾಜಿಸಿದೆ. ಆರೋ ಸಿಸ್ಟಮ್ ಮಾತ್ರ ತಲಾ $3 ಮಿಲಿಯನ್ ಬೆಲೆಯ ಇಂಟರ್ಸೆಪ್ಟರ್ಗಳನ್ನು ಹಾರಿಸುತ್ತದೆ.
ಇರಾನಿನ ಕ್ಷಿಪಣಿ ದಾಳಿ ತೀವ್ರಗೊಳಿಸುತ್ತಿರುವುದರಿಂದ ಇಸ್ರೇಲಿ ವಾಯು ರಕ್ಷಣಾ ದಾಸ್ತಾನು ಮುಗಿಯುವ ಹಂತ ತಲುಪಿವೆ. ಅಮೆರಿಕದಿಂದ ತ್ವರಿತ ಮರುಪೂರೈಕೆ ಅಥವಾ ನೇರ ಹಸ್ತಕ್ಷೇಪ ದೊರೆಯದೇ ಇದ್ದರೆ ಇಸ್ರೇಲ್ ಶಸ್ತ್ರಾಸ್ತ್ರ 10 ಅಥವಾ 12 ದಿನಗಳಲ್ಲಿ ಮುಗಿಯಬಹುದು ಎಂದು ಹೇಳಲಾಗಿದೆ.
ಇಸ್ರೇಲ್ ದಾಳಿಯಲ್ಲಿ ಇದುವರೆಗೆ ಇರಾನ್ ನಲ್ಲಿ 600 ಮಂದಿ ಸಾವು, 6000 ಮಂದಿಗೆ ಗಾಯವಾಗಿದೆ ಎಂದು ವರದಿ ಹೇಳಿದೆ.



