ಇನ್ಫೋಸಿಸ್ ಕಚೇರಿಯ ಶೌಚಾಲಯದಲ್ಲಿ 30ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳ ಬಟ್ಟೆ ಬದಲಿಸುವ ದೃಶ್ಯವನ್ನು ರಹಸ್ಯವಾಗಿ ಸೆರೆಹಿಡಿದಿದ್ದ ಉದ್ಯೋಗಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇನ್ಫೋಸಿಸ್ ಕಚೇರಿಯಲ್ಲಿ ಈ ಕೃತ್ಯ ಎಸಗುತ್ತಿದ್ದ ಆಂಧ್ರಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಶೌಚಾಲಯದಲ್ಲಿ ಮಹಿಳಾ ಉದ್ಯೋಗಿದ ವಿಡಿಯೋ ರೆಕಾರ್ಡ್ ಮಾಡುತ್ತಿರುವಾಗಲೇ ಸ್ವಪ್ನಿಲ್ ಸಿಕ್ಕಿಬಿದ್ದಿದ್ದ. ಶೌಚಾಲಯಕ್ಕೆ ತೆರಳಿದ್ದ ಮಹಿಳಾ ಉದ್ಯೋಗಿಗಳು ಬಟ್ಟೆ ಬದಲಿಸುವ ದೃಶ್ಯವನ್ನು ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡುತ್ತಿದ್ದ
ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆಯ ಡೋರ್ ಮೇಲೆ ರಿಪ್ಲೆಕ್ಟ್ ಆಗಿದ್ದನ್ನು ಗಮನಿಸಿದ ಮಹಿಳೆಯೊಬ್ಬರು ಕೂಡಲೇ ಹೊರಬಂದು ನೋಡಿದಾಗ ಯುವತಿ ಮಾತ್ರ ಕಂಡಿದ್ದಾಳೆ. ಮತ್ತೆ ಶೌಚಾಲಯದ ಒಳಹೋಗಿ ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಮಹಿಳೆ ಕಿರುಚಾಡಿದ್ದಾರೆ. ಸ್ವಪ್ನಿಲ್ ಕರೆಸಿದ ಆಡಳಿತ ಆತನ ಮೊಬೈಲ್ ಪರಿಶೀಲಿಸಿದಾಗ ಇದೇ ರೀತಿ 30ಕ್ಕೂ ಹೆಚ್ಚು ಮಹಿಳೆಯರ ವೀಡಿಯೊ ಸೆರೆ ಹಿಡಿದಿರುವುದು ಪತ್ತೆಯಾಗಿದೆ. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ನೀಡುವ ಬದಲು ಕ್ಷಮೆ ಯಾಚಿಸಿ ಬಿಟ್ಟಿದ್ದಾರೆ.
ಮಹಿಳಾ ಉದ್ಯೋಗಿ ತನ್ನ ಪತಿಗೆ ಈ ವಿಚಾರ ತಿಳಿಸಿದಾಗ ಪತಿ ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಇನ್ಫೋಸಿಸ್ ಕಂಪನಿಯ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಬುಧವಾರ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಆರೋಪಿ ಸ್ವಪ್ನಿಲ್‌ನನ್ನು ಬಂಧಿಸಿದ್ದಾರೆ. ಈತ ಇನ್ಫೋಸಿಸ್ ಕಂಪನಿಯ ಹೀಲೀಕ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಬಂದಿದೆ.



