ಸರಕು ಮತ್ತು ಸಾಗಾಣೆ ಮೇಲಿನ ತೆರಿಗೆ ಜಿಎಸ್ ಟಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ದೇಶದ ಜನತೆಗೆ ಈ ಬಾರಿ ದೀಪಾವಳಿಗೆ ಡಬಲ್ ಧಮಾಕ ಉಡುಗೊರೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ದಾಖಲೆಯ ಬಾರಿಗೆ ೭೯ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಬಾರಿ ದೀಪಾವಳಿಗೆ ನಾನು ಡಬಲ್ ದೀಪಾವಳಿ ಸಂಭ್ರಮ ತರಲಿದ್ದೇನೆ. ಈ ಬಾರಿ ದೀಪಾವಳಿಗೆ ದೇಶದ ಜನತೆ ದೊಡ್ಡ ಉಡುಗೊರೆ ಪಡೆಯಲಿದ್ದಾರೆ. ಮುಂದಿನ ತಲೆಮಾರಿನ ಜಿಎಸ್ ಟಿ ಜಾರಿಗೆ ಬರಲಿದ್ದು, ಇದರಿಂದ ದೇಶದ ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಿದೆ ಎಂದರು.
ದೇಶದ ತೆರಿಗೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ೮ ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಜಿಎಸ್ ಟಿ ಪದ್ಧತಿ ಜಾರಿಗೆ ತರಲಾಯಿತು. ಇದೀಗ ದೇಶದ ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು ಜಿಎಸ್ ಟಿ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತದೆ ಎಂದು ಅವರು ಹೇಳಿದರು.



