ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ 10ನೇ ತರಗತಿ ವಿದ್ಯಾರ್ಥಿ ಕೊಲೆಗೆ ಯತ್ನಿಸಿದ ಭೀಕರ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ.
ವಿದ್ಯಾರ್ಥಿಯ ಹುಚ್ಚಾಟಕ್ಕೆ ತತ್ತರಿಸಿದ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟು ಹೋಗಿದೆ. ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
10ನೇ ತರಗತಿ ವಿದ್ಯಾರ್ಥಿ ಸೂರ್ಯಾಂಶ್ ಕೊಚಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಪೆಟ್ರೋಲ್ ಬಾಟಲಿಯೊಂದಿಗೆ ಶಿಕ್ಷಕಿಯ ಮನೆಗೆ ತಲುಪಿದ್ದ. 26 ವರ್ಷದ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ.
ಪ್ರಾಥಮಿಕ ತನಿಖೆಯಲ್ಲಿ ಸೂರ್ಯಾಂಶ್ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ. ಆಗಸ್ಟ್ 15ರ ಕಾರ್ಯಕ್ರಮಕ್ಕೆ ಶಿಕ್ಷಕಿ ಸೀರೆ ಧರಿಸಿ ಬಂದಾಗ ಆರೋಪಿ ವಿದ್ಯಾರ್ಥಿ ಕಮೆಂಟ್ ಮಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕಿ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು.
ಸೂರ್ಯಾಂಶ್ಗೆ ಮುಖ್ಯೋಪಾಧ್ಯಾಯರು ಕರೆ ಮಾಡಿ ಬೈದಿದ್ದರು, ಇದರಿಂದ ಕೋಪಗೊಂಡ ಸೂರ್ಯಂಶ್, ಮನೆಗೆ ತೆರಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಕೂಡಲೇ ಮನೆಯವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಅತಿಥಿ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಈ ಘಟನೆಯಿಂದ ಶಿಕ್ಷಕಿಗೆ ಬುದ್ದಿ ಕಲಿಸಲು ಈ ಕೃತ್ಯ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಕೊತ್ವಾಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಡೊಂಗರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.



