ವಿಶಾಖಪಟ್ಟಣ: ಬೆಂಗಳೂರು, ಹೈದರಾಬಾದ್, ಅಮರಾವತಿ ಹಾಗೂ ಚೆನ್ನೈ ನಡುವೆ ಬುಲೆಟ್ ರೈಲು ಓಡಲಿದ್ದು, ಇದಕ್ಕಾಗಿ ಈಗಾಗಲೇ ಸಮೀಕ್ಷೆಗೆ ಆದೇಶ ನೀಡಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಭಾರತ ಆಹಾರ ಉತ್ಪಾದನಾ ಸಮ್ಮೇಳನದಲ್ಲಿ ಮಾತನಾಡಿದ ಅವ̧ರು, ದಕ್ಷಿಣದ ಭಾರತದ ಈ ನಾಲ್ಕು ಪ್ರಮುಖ ನಗರಗಳ ಐದು ಕೋಟಿ ಜನರಿಗೆ ಬುಲೆಟ್ ರೈಲಿನಿಂದ ನೆರವಾಗಲಿದೆ. ಅತಿ ಶೀಘ್ರದಲ್ಲಿ ದಕ್ಷಿಣ ಭಾರತಕ್ಕೆ ಈ ಸೌಲಭ್ಯ ಲಭ್ಯವಾಗಲಿದೆ ಎಂದರು.
ಹೈದರಾಬಾದ್‌ನಿಂದ, ಚೆನ್ನೈ, ಅಮರಾವತಿ, ಬೆಂಗಳೂರು ಈ ನಾಲ್ಕೂ ನಗರಗಳು ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಾಗಲಿವೆ. ಇವುಗಳನ್ನು ಬುಲೆಟ್ ರೈಲು ಸಂಪರ್ಕಿಸಲಿದೆ. ಇದು ಕಾರ್ಯರೂಪಕ್ಕೆ ಬಂದ ನಂತರ ಲಾಜಿಸ್ಟಿಕ್ ಕ್ಷೇತ್ರದ ಬೆಳವಣಿಗೆಯನ್ನು ಜನರು ಪ್ರತ್ಯಕ್ಷವಾಗಿ ನೋಡಬಹುದು’ ಎಂದು ನಾಯ್ಡು ಹೇಳಿದ್ದಾರೆ.
ಗುಜರಾತ್ ನ ಅಹಮದಾಬಾದ್ ಮತ್ತು ಮುಂಬೈ ನಡುವಣ ದೇಶದ ಮೊದಲ ಬುಲೆಟ್ ರೈಲು ಘೋಷಣೆಯಾಗಿ ದಶಕಗಳೇ ಕಳೆದಿದ್ದರೂ ಇದುವರೆಗೂ ಅನುಷ್ಠಾನವಾಗಿಲ್ಲ. ಇದೀಗ ಮೂರು ರಾಜ್ಯಗಳನ್ನು ಸಂಪರ್ಕಿಸಲಿರುವ ದೇಶದ ಎರಡನೇ ಬುಲೆಟ್ ರೈಲು ಘೋಷಣೆ ಆಗಿದೆ.



