ಸಂಘಟಿತ ಬೌಲಿಂಗ್ ದಾಳಿ ಮಾಡಿದ ಭಾರತದ ಬೌಲರ್ ಗಳು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 127 ರನ್ ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದೆ.
ದುಬೈನಲ್ಲಿ ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ ಕಲೆ ಹಾಕಿತು.
ಪಾಕಿಸ್ತಾನ ತಂಡಕ್ಕೆ ಆರಂಭದಲ್ಲೇ ಹಾರ್ದಿಕ್ ಪಾಂಡ್ಯ ಆಘಾತ ನೀಡಿದರು. ನಂತರ ಬುಮ್ರಾ ಶಾಕ್ ನೀಡಿದರು. ಇದರಿಂದ ಪಾಕಿಸ್ತಾನ 6 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಒಂದೆಡೆ ತಂಡವನ್ನು ಆಧರಿಸಿದ ಸಾಹಿಬಾದ್ಜಾ ಫರ್ಹಾನ್ 44 ಎಸೆತಗಳಲ್ಲಿ 1 ಬೌಂಡರಿ ಮತ್ತು ೩ ಸಿಕ್ಸರ್ ಒಳಗೊಂಡ 40 ರನ್ ಬಾರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ನಿಧಾನಗತಿ ಬ್ಯಾಟಿಂಗ್ ನಿಂದ ತಂಡ ಬೃಹತ್ ಮೊತ್ತ ಗಳಿಸುವ ಅವಕಾಶ ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ಶಹೀನ್ ಶಾನ್ ಅಫ್ರಿದಿ 16 ಎಸೆತಗಳಲ್ಲಿ 4 ಸಿಕ್ಸರ್ ನೊಂದಿಗೆ 33 ರನ್ ಬಾರಿಸಿ ತಂಡವನ್ನು 120 ರ ಗಡಿ ದಾಟಿಸಿದರು.
ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ 3, ಅಕ್ಸರ್ ಪಟೇಲ್, ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದು ಗಮನ ಸೆಳೆದರೆ, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಗಳಿಸಿದರು.



