ಸೀರೆ ಕಳ್ಳಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದ ಅಂಗಡಿ ಮಾಲೀಕ ಸೇರಿದಂತೆ ಇಬ್ಬರು ಹಾಗೂ ಕಳ್ಳಿಯನ್ನು ಬೆಂಗಳೂರಿನ ಕೆಆರ್ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂತಕಲ್ ಮೂಲದ ಹಂಪಮ್ಮ ಎಂಬ ಮಹಿಳೆ ಸೀರೆ ಕದಿಯಲು ಬಂದಾಗ ಮಾಲೀಕರ ಕೈಗೆ ಸಿಕ್ಕಿಬಿದ್ದು ಹಲ್ಲೆಗೆ ಒಳಗಾಗಿದ್ದಳು.
ಹಲ್ಲೆ ನಡೆಸಿದ ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ ಆ್ಯಂಡ್ ಸಾರೀಸ್ ಅಂಗಡಿ ಮಾಲೀಕ ಉಮೇದ್ ಕುಮಾರ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸೀರ್ವಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಸೆ. 21ರಂದು ಬಟ್ಟೆ ಅಂಗಡಿ ಬಳಿ ಮಗನ ಜೊತೆ ಬಂದಿದ್ದ ಈಕೆ ಅಂಗಡಿಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ 50ಕ್ಕೂ ಹೆಚ್ಚು ಸೀರೆಯಿರುವ ಬಂಡಲ್ ಸಮೇತ ಕದ್ದು ಪರಾರಿಯಾಗಿದ್ದಳು. ಈಕೆ ಕೈಚಳಕ ತೋರಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಂಗಡಿ ಮಾಲೀಕ ಉಮೇದ್, ಸಿಸಿಟಿವಿ ದೃಶ್ಯವನ್ನು ವಾಟ್ಸಾಪ್ ಗ್ರೂಪ್ಗೆ ಶೇರ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೀರೆ ಕದ್ದಿದ್ದ ಮಹಿಳೆ ಮತ್ತೆ ಚಿಕ್ಕಪೇಟೆಯ ಬಟ್ಟೆ ಅಂಗಡಿಗಳ ಮುಂದೆ ಮತ್ತೆ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ್ದ ಸ್ಥಳೀಯರು ಉಮೇದ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಉಮೇಶ್, ಆಕೆಯ ಎದೆಗೆ ಒದ್ದು ಅಮಾನುಷವಾಗಿ ಹಲ್ಲೆ ಮಾಡಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳ್ಳತನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಹಿಳೆಯನ್ನು ಬಂಧಿಸಿದ್ದರು.
ಮಹಿಳೆ ಮೇಲೆ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸಿಸಿಟಿವಿ ದೃಶ್ಯದಲ್ಲೇನಿದೆ?
ಮಹಿಳೆ ಬಟ್ಟೆ ಅಂಗಡಿ ಮುಂದೆ ಕಾಯುತ್ತಾ ನಿಂತು, ಅಂಗಡಿಯಲ್ಲಿ ಯಾರೂ ಇಲ್ಲದೇ ಇರುವುದನ್ನು ಖಚಿತಪಡಿಸಿಕೊಂಡ ಬಳಿಕ ಅಂಗಡಿ ಒಳಗಿದ್ದ ಸೀರೆ ಬಂಡಲ್ ಅನ್ನು ಕದ್ದು ಒಯ್ಯುವ ದೃಶ್ಯ ಸೆರೆಯಾಗಿದೆ. ಸುಮಾರು ಹೊತ್ತು ಅಂಗಡಿ ಮುಂದೆ, ಒಳಗೆ ಹೋಗುತ್ತಾ, ಬೇರೆ ಯಾರಾದರೂ ಬರುತ್ತಾರಾ? ನೋಡುತ್ತಾರಾ ಎನ್ನವುದನ್ನು ಗಮನಿಸಿ ಕಳ್ಳತನ ಮಾಡಿದ್ದಾಳೆ. ಮಹಿಳೆ ಜೊತೆಗೆ ಆಕೆಯ ಜೊತೆಗೆ ಆಕೆಯ ಮಗ ಕೂಡ ಅಂಗಡಿ ಮುಂದೆ ಕಾಯುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.



