ಬೆಂಗಳೂರು: ಗ್ರಾಹಕರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಪವನ್ ಕುಮಾರ್, ತಂದೆ ಮುನಿರಾಜು ಬಂಧಿತ ಆರೋಪಿ. ಕೆಂಗೇರಿ ಉಪನಗರದಲ್ಲಿ ಸಣ್ಣದಾದ ಚಿನ್ನಾಭರಣಗಳ ರಿಪೇರಿ ಅಂಗಡಿ ನಡೆಸುತ್ತಿದ್ದ ಆರೋಪಿಗಳು ಜೂಜಾಟದ ಗೀಳಿಗೆ ಬಿದ್ದಿದ್ದರು. ಹೀಗಾಗಿ, ಲಕ್ಷಾಂತರ ರೂ ಸಾಲ ಮಾಡಿಕೊಂಡು, ಹಣ ಮರುಪಾವತಿಸಲು ವಂಚನೆ ಎಸಗಿದ್ದರು.
2019ರಿಂದ ಕೆಂಗೇರಿ ಉಪನಗರದಲ್ಲಿ ಚಿನ್ನದ ರಿಪೇರಿ ಅಂಗಡಿ ನಡೆಸುತ್ತಿದ್ದ ಆರೋಪಿಗಳು ಚಿಕ್ಕಪುಟ್ಟ ಆಭರಣಗಳ ರಿಪೇರಿ ಮತ್ತು ಹೊಳಪಿನ ಕೆಲಸ ಮಾಡುವ ಮೂಲಕ ಸ್ಥಳೀಯ ಗ್ರಾಹಕರ ನಂಬಿಕೆ ಗಳಿಸಿದ್ದರು.
ಆದರೆ ಇತ್ತೀಚೆಗೆ, ಆರೋಪಿಗಳು ಆಂಧ್ರಪ್ರದೇಶದಲ್ಲಿ ಮಟ್ಕಾ ಸೇರಿದಂತೆ ವಿವಿಧ ರೀತಿಯ ಜೂಜಿನ ಚಟಕ್ಕೆ ಬಿದ್ದು, ಲಕ್ಷಾಂತರ ರೂ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂಗಡಿ ಮುಚ್ಚಿ ಪರಾರಿ
ಸಾಲ ತೀರಿಸುವ ಉದ್ದೇಶದಿಂದ, ರಿಪೇರಿಗೆ ಬಂದ ಗ್ರಾಹಕರ ಚಿನ್ನಾಭರಣಗಳನ್ನು ಹಿಂದಿರುಗಿಸದೇ ಅವರು ವಿಳಂಬ ಮಾಡಲು ಆರಂಭಿಸಿದ್ದರು. ಕಳೆದ ಐದಾರು ತಿಂಗಳಿಂದ, ಚಿನ್ನ ಕೇಳಿದ ಗ್ರಾಹಕರನ್ನು ಸತಾಯಿಸುತ್ತಾ ಸಬೂಬು ಹೇಳುತ್ತಾ ಕಳುಹಿಸುತ್ತಿದ್ದರು. ಈ ನಡುವೆ ಹಲವು ಗ್ರಾಹಕರು ನೀಡಿದ್ದ ಚಿನ್ನವನ್ನು ಒಟ್ಟುಗೂಡಿಸಿ, ಒಂದೇ ಬಾರಿ ಅಂಗಡಿಯನ್ನು ಮುಚ್ಚಿ ಇಬ್ಬರೂ ಪರಾರಿಯಾಗಿದ್ದರು. ಬಳಿಕ ವಂಚನೆಗೊಳಗಾದ ಗ್ರಾಹಕರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಿರುಪತಿಯಲ್ಲಿ ಮಾರಾಟ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಪುತ್ರ ಪವನ್ ಕುಮಾರ್‌ನನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ, ಆರೋಪಿಯ ತಂದೆ ಮುನಿರಾಜು ತಿರುಪತಿಯಲ್ಲಿ ಕಳೆದ 2 ತಿಂಗಳ ಹಿಂದೆ ಹೊಸದಾಗಿ ಚಿನ್ನ ರಿಪೇರಿ ಅಂಗಡಿ ತೆರೆದಿದ್ದು, ಬೆಂಗಳೂರಿನಲ್ಲಿ ವಂಚಿಸಿದ ಚಿನ್ನಾಭರಣಗಳನ್ನು ಆ ಅಂಗಡಿಯ ಮೂಲಕ ಮಾರಾಟ ಮಾಡುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಅಪ್ಪನ ಈ ಹೊಸ ಅಂಗಡಿಯ ಕುರಿತು ಮಗ ಪವನ್‌ಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರಿಗೆ ಚಿನ್ನ ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಸದ್ಯ ಬಂಧಿತ ಪವನ್‌ನನ್ನ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.



