ಇಂಡಿಯನ್ ಐಡಿಯಲ್ -3 ವಿಜೇತ, ಪಾತಾಳ ಲೋಕ-2 ಚಿತ್ರದಲ್ಲಿ ನಟಿಸಿದ್ದ ನಟ ಹಾಗೂ ಗಾಯಕ ಪ್ರಶಾಂತ್ ತಮಂಗ್ ಪಾರ್ಶ್ವವಾಯು ಬಡಿದು ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ಡಾರ್ಜಲಿಂಗ್ ಮೂಲದ ಪ್ರಶಾಂತ್ ತಮಂಗ್ ಭಾನುವಾರ ಮುಂಜಾನೆ ದೆಹಲಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಪ್ರಶಾಂತ್, ನಂತರ ಕೋಲ್ಕತಾ ಪೊಲೀಸ್ ಕಾನ್ ಸ್ಟೇಬಲ್ ಆಗಿ ಸೇರಿಕೊಂಡಿದ್ದರು. ಪೊಲೀಸ್ ಆಗಿದ್ದರೂ ಸಂಗೀತ ಹಾಗೂ ನಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ತಮಂಗ್ ಆಕ್ಟ್ರೇಸ್ಟಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು.
2007ರಲ್ಲಿ ಇಂಡಿಯನ್ ಐಡಿಯಲ್ -3 ವಿಜೇತರಾಗುವ ಮೂಲಕ ತಮಂಗ್ ಮನೆಮಾತಾಗಿದ್ದರು. ಕಿನಾ ಮಾಯಾಮ, ನಿಶಾನಿ ಪರದೇಶಿ, ಆಂಜೆಲೊ ಯೊ ಮಾಯಾ ಯೋ ಮುಂತಾದ ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದು ನಂತರ ಪಾತಾಳ ಲೋಕ-೨ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.
ಗೋರ್ಖಾ ಸಮುದಾಯಕ್ಕೆ ಸೇರಿದ ಪ್ರಶಾಂತ್ ಇಂಡಿಯನ್ ಐಡಿಯಲ್ ಗೆದ್ದ ನಂತರ ಇಡೀ ಗೋರ್ಖಾ ಸಮುದಾಯ ಸಂಭ್ರಮ ಆಚರಿಸಿತು. ಡಾರ್ಜಲಿಂಗ್, ತೆರಾಯ್, ದೂರಾಸ್, ಸಿಕ್ಕಿಂ ಮುಂತಾದೆಡೆ ಹರಿದು ಹಂಚಿ ಹೋಗಿರುವ ಗೋರ್ಖಾ ಸಮುದಾಯ ಈತನ ಸಾಧನೆಯಿಂದ ಒಂದಾಗಿತ್ತು.



