ಬೆಂಗಳೂರು: ಬ್ಯಾನರ್ ತೆರವು ವಿಷಯದಲ್ಲಿ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ದೂರವಾಣಿಯಲ್ಲಿ ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ನಿಂದಿಸಿದ್ದೂ ಅಲ್ಲದೇ ಜೀವ ಬೆದರಿಕೆ ಹಾಕಿದ್ದಕ್ಕಾಗಿ ಪೌರಾಯುಕ್ತೆ ನಿರ್ಮಲಾ ಗೌಡ ನೀಡಿದ ದೂರಿನ ಅನ್ವಯ ಶಿಡ್ಲಘಟ್ಟ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳಾ ಅಧಿಕಾರಿಗೆ ಅಶ್ಲೀಲವಾಗಿ ನಿಂದಿಸಿದ ರಾಜೀವ್ ಗೌಡ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರೆ, ಡಿಸಿಎಂ ಡಿಕೆ ಶಿವಕುಮಾರ್ ತಪ್ಪು ಮಾಡಿದವರು ಯಾರೇ ಆದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಬಿಎನ್ಎಸ್ 79, 132, 352,199, 54 ಅಡಿಯಲ್ಲಿ ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದೆ. ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಜೀವ್ ಗೌಡ ನಾನು ಬ್ಯಾನರ್ ಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿದ್ದೇನೆ ಹೊರತು ಅವರಿಗೆ ಅಲ್ಲ. ಒಂದು ವೇಳೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ರಾಜೀವ್ ಗೌಡ ಕ್ಷಮೆಯಾಚನೆಗೆ ಪ್ರತಿಕ್ರಿಸದ ನಿರ್ಮಲಾ ಗೌಡ, ಕೇಂದ್ರ ಸ್ಥಾನದಲ್ಲಿ ಏಕಾಂಗಿಯಾಗಿದ್ದೇನೆ. ಹೀಗಾಗಿ ಮುಂದಿನ ಆಗು ಹೋಗುಗಳಿಗೆ ರಾಜೀವ್ ಗೌಡ ಅವರೇ ಹೊಣೆ. ಇನ್ನು ಸೂಕ್ತ ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಘಟನೆಯಿಂದ ನನಗೆ ಮಾನಸಿಕವಾಗಿ ತೀವ್ರ ಆಘಾತವಾಗಿದೆ. ಜನ ಸೇವೆ ಮಾಡಬೇಕು ಎಂಬ ತಂದೆಯ ಕನಸಿನಂತೆ ಐಪಿಎಸ್ ಪರೀಕ್ಷೆ ಬರೆದು ಈ ಹುದ್ದೆಗೆ ಬಂದಿದ್ದೇನೆ. ಆತ್ಮಸ್ಥೈರ್ಯ ಕುಂದಿಸಿದ್ದಾರೆ. ಕೇಂದ್ರ ಸ್ಥಾನದಲ್ಲಿ ಒಬ್ಬಳೇ ವಾಸವಿದ್ದೇನೆ. ಸೂಕ್ತ ರಕ್ಷಣೆ ನೀಡಬೇಕು. ಹಾಗೇ ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿರುವ ರಾಜೀವ್ ಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಏನಿದು ವಿವಾದ:
ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ‘ಕಲ್ಟ್’ ಸಿನಿಮಾದ ಪ್ರಚಾರ ಸಭೆ ನಡೆದಿತ್ತು. ಈ ವೇಳೆ, ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಸಿನಿಮಾ ಪ್ರಚಾರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಟ್ರಾಫಿಕ್ ಸಮಸ್ಯೆಗೆ ಉಂಟಾಯಿತು.
ರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಕಚೇರಿಗೆ ತಂದಿಟ್ಟಿದ್ದರು. ಈ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ರಾಜೀವ್ ಗೌಡರ ಬೆಂಬಲಿಗ ಅಪ್ಸರ್‌ಗೆ ಪೌರಾಯುಕ್ತರು ಮಾಹಿತಿ ನೀಡಿದ್ದರು.ಆದರೆ, ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ರಾಜೀವ್ ಗೌಡ ತೀವ್ರ ಆಕ್ರೋಶಗೊಂಡು ಪೌರಾಯುಕ್ತರಿಗೆ ಕರೆ ಮಾಡಿ ಜಗಳವಾಡಿದ್ದಾರೆ. ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. “ನಮ್ಮ ಬ್ಯಾನರ್ ಬಿಚ್ಚಿಸಿದರೆ ಬೆಂಕಿ ಹಚ್ಚಿಸುವೆ. ನನ್ನ ಒಳ್ಳೆಯತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ” ಎಂದು ಹರಿಹಾಯ್ದಿದ್ದಾರೆ. ಸದ್ಯ ಅಶ್ಲೀಲವಾಗಿ ಬೈದಿರುವ ರಾಜೀವ್ ಗೌಡನ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜೀವ್ ಗೌಡನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾ ಗೌಡ, ಶಿಷ್ಟಾಚಾರದ ಪ್ರಕಾರವೇ ನಾವು ಬ್ಯಾನರ್ ತೆರವುಗೊಳಿಸಿದ್ದೇವೆ. ಯಾವುದೇ ಒತ್ತಡದಿಂದ ನಾವು ಬ್ಯಾನರ್ ತೆರವುಗೊಳಿಸಿರಲಿಲ್ಲ. ಬ್ಯಾನರ್ ತೆರವುಗೊಳಿಸುವಾಗ ಕೌನ್ಸಿಲರ್ಗೆ ಮಾಹಿತಿ ನೀಡಿದ್ದು, ಬೇರೆ ಸ್ಥಳದಲ್ಲಿ ಬ್ಯಾನರ್ ಹಾಕಿಕೊಳ್ಳುವಂತೆ ನಾವು ಹೇಳಿದ್ದೆವು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ನಮಗೆ ಬಹಳ ನೋವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ರಾಜೀವ್ ಗೌಡ ಹೇಳಿದ್ದೇನು?
ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅಧಿಕಾರಿಗೆ ಅಶ್ಲೀಲವಾಗಿ ಬೈದು ನಿಂದನೆ ಮಾಡಿರುವ ಆಡಿಯೋ ವೈರಲ್ ಆಗಿರುವ ಮಾತನಾಡಿರುವ ರಾಜೀವ್ ಗೌಡ, ನಾನು ಅಧಿಕಾರಿಯ ಜೊತೆ ಕೆಟ್ಟದಾಗಿ ಮಾತನಾಡಿಲ್ಲ. ಅಧಿಕಾರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಉದ್ದೇಶ ಪೂರಕವಾಗಿ ನಾನು ಮಾತನಾಡಿಲ್ಲ. ಆಡಿಯೋದಲ್ಲಿ ಮಾತನಾಡಿರುವುದು ನಾನೇ. ಆದರೆ ಕೆಟ್ಟದಾಗಿ ಮತನಾಡಿಲ್ಲ. ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಬೇಸರದಿಂದ ಮತನಾಡಿದ್ದೇನೆ. ಆಯುಕ್ತಗೆ ನಾನು ಬೆಂಕಿ ಹಚ್ಚುತ್ತೇನೆ ಎಂದು ಹೇಳಿಲ್ಲ. ಬದಲಿಗೆ ಫ್ಲೆಕ್ಸ್ ಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ನನ್ನದು ತಪ್ಪಾಗಿದ್ದರೆ ಏನೇ ಕ್ರಮ ತೆಗೆದುಕೊಂಡರು ಎದುರಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ವಿಪಕ್ಷಗಳು ಆಕ್ರೋಶ:
ಶಿಡ್ಲಘಟ್ಟದಲ್ಲಿ ನಗರಸಭೆ ಪೌರಾಯುಕ್ತೆಗೆ ಅಶ್ಲೀಲವಾಗಿ ಬೈದು ಅವಾಜ್ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಕೂಡಲೇ ಬಂಧಿಸಬೇಕೆಂದು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರೇ ಖುದ್ದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಮಹಿಳಾ ಅಧಿಕಾರಿಗಳಿಗೆ ಹೀಗಾದರೆ ಹೇಗೆ? ಅವರು ಹೇಗೆ ಕಾರ್ಯನಿರ್ವಹಿಸಬೇಕು? ಎಂದು ಪ್ರಶ್ನಿಸಿದ್ದಾರೆ.



