Wednesday, June 24, 2026
Google search engine
Homeರಾಜ್ಯಚನ್ನಪಟ್ಟಣ ಅಬ್ಬೂರುಗುಡ್ಡೆ ಅರಣ್ಯದಲ್ಲಿ ಅಗ್ನಿ ಅವಘಡ: 30 ಎಕರೆ ಪ್ರದೇಶಕ್ಕೆ ಆವರಿಸಿದ ಬೆಂಕಿ

ಚನ್ನಪಟ್ಟಣ ಅಬ್ಬೂರುಗುಡ್ಡೆ ಅರಣ್ಯದಲ್ಲಿ ಅಗ್ನಿ ಅವಘಡ: 30 ಎಕರೆ ಪ್ರದೇಶಕ್ಕೆ ಆವರಿಸಿದ ಬೆಂಕಿ

ಚನ್ನಪಟ್ಟಣ ತಾಲೂಕಿನ ಅಬ್ಬೂರುಗುಡ್ಡೆ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಏಕಾಏಕಿ ಕಾಣಿಸಿಕೊಂಡ ಅಗ್ನಿ ಅವಘಡವು ಆತಂಕ ಮೂಡಿಸಿದ್ದು, ಸುಮಾರು 25ರಿಂದ 30 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ. ಕ್ಷಣಾರ್ಧದಲ್ಲಿ ಮೂರು ದಿಕ್ಕುಗಳಿಗೆ ಹರಡಿದ ಬೆಂಕಿಯನ್ನು ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ದೀರ್ಘ ಕಾರ್ಯಾಚರಣೆ ನಡೆಸಿ ನಿಯಂತ್ರಣಕ್ಕೆ ತಂದಿದ್ದಾರೆ.

ಭಾನುವಾರ ಸಂಜೆ ಅಬ್ಬೂರುಗುಡ್ಡೆ ಅರಣ್ಯ ಪ್ರದೇಶದ ಸೆಕ್ಷನ್-4ರಲ್ಲಿ ಬೆಂಕಿ ಕಾಣಿಸಿಕೊಂಡು, ಪಟ್ಲು ಹಾಗೂ ಕೋಮನಹಳ್ಳಿ ಭಾಗದ ಮೇಲ್ಭಾಗದವರೆಗೆ ಆವರಿಸಿಕೊಂಡಿತು. ವಲಯ ಅರಣ್ಯಾಧಿಕಾರಿ ಮಲ್ಲೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ತಂಡಗಳಾಗಿ ವಿಭಜನೆಯಾಗಿ ಕಾರ್ಯಾಚರಣೆ ಆರಂಭಿಸಿದರು.

ಕಠಿಣ ಭೌಗೋಳಿಕ ಪರಿಸ್ಥಿತಿ ನಡುವೆಯೂ ಸಿಬ್ಬಂದಿ ನಿರಂತರ ಶ್ರಮವಹಿಸಿ ಭಾನುವಾರ ತಡರಾತ್ರಿ ಸುಮಾರು 12 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿ ಅವಘಡದಲ್ಲಿ ಸುಮಾರು 25ರಿಂದ 30 ಎಕರೆ ವಿಸ್ತೀರ್ಣದ ಹುಲ್ಲು ಸುಟ್ಟುಹೋಗಿದ್ದು, ಯಾವುದೇ ಪ್ರಾಣಿ, ಪಕ್ಷಿ ಅಥವಾ ಮರಗಿಡಗಳಿಗೆ ಹಾನಿಯಾಗಿಲ್ಲ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.

ಅಬ್ಬೂರುಗುಡ್ಡೆ ಅರಣ್ಯ ಪ್ರದೇಶ ಕಣ್ಣ ಅರಣ್ಯಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಕೃತ್ಯದಿಂದಲೇ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಅಮಾವಾಸ್ಯೆ ದಿನದಂದು ಅರಣ್ಯ ಪ್ರದೇಶದಲ್ಲಿ ಪೂಜೆ ಅಥವಾ ಇತರ ಚಟುವಟಿಕೆಗಳು ನಡೆದಿರುವುದರಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಅನುಮಾನವೂ ಮೂಡಿದೆ. ಘಟನೆಗೆ ಕಾರಣ ಪತ್ತೆ ಹಚ್ಚಲು ಅರಣ್ಯ ಇಲಾಖೆ ತನಿಖೆ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments