Friday, May 15, 2026
Google search engine
Homeಕ್ರೀಡೆರಣಜಿ ಟ್ರೋಫಿ: ಹಿನ್ನಡೆ ಸುಳಿಯಲ್ಲಿ ಕರ್ನಾಟಕ

ರಣಜಿ ಟ್ರೋಫಿ: ಹಿನ್ನಡೆ ಸುಳಿಯಲ್ಲಿ ಕರ್ನಾಟಕ

ಆರಂಭಿಕ ಅನೀಶ್ ಅಜೇಯ 80 ರನ್ ಸಹಾಯದ ಹೊರತಾಗಿಯೂ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಹಿನ್ನಡೆಯ ಭೀತಿಗೆ ಸಿಲುಕಿದೆ.

ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಮಧ್ಯಪ್ರದೇಶ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 323 ರನ್ ಗೆ ನಿಯಂತ್ರಿಸಿದ ಕರ್ನಾಟಕ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿದೆ.

ಕರ್ನಾಟಕ ತಂಡ ಪಂದ್ಯ ಮುನ್ನಡೆ ಸಾಧಿಸಬೇಕಾದರೆ ಉಳಿದ 2 ವಿಕೆಟ್ ಗಳಿಂದ 155 ರನ್ ಬೆನ್ನಟ್ಟಬೇಕಾದ ಕಠಿಣ ಹಾದಿಯಲ್ಲಿದೆ.

ಕರ್ನಾಟಕದ ಪರ ಆರಂಭಿಕ ಅನೀಶ್ 153 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ ಹೋರಾಟದ 80 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಒಂದು ಹಂತದಲ್ಲಿ ಕರ್ನಾಟಕದ ಸಾರಾಂಶ್ ಜೈನ್ ಮತ್ತು ಆರ್ಯನ್ ಪಾಂಡೆ ದಾಳಿಗೆ ತತ್ತರಿಸಿ 60 ರನ್ ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದ ನಾಯಕ ಮಯಾಂಕ್ ಅಗರ್ವಾಲ್ (0) ಮತ್ತು ದೇವದತ್ ಪಡಿಕ್ಕಲ್ (0) ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದ್ದು ತಂಡಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಉಂಟಾಯಿತು.

6ನೇ ವಿಕೆಟ್ ಗೆ ಅನೀಶ್ ಮತ್ತು ಶ್ರೇಯಸ್ ಗೋಪಾಲ್ 82 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಆದರೆ ಶ್ರೇಯಸ್ ಗೋಪಾಲ್ 76 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 41 ರನ್ ಗಳಿಸಿದ್ದಾಗ ಔಟಾದರು. ನಂತರ ಮತ್ತೆ ತಂಡ ನಾಟಕೀಯ ಕುಸಿತಕ್ಕೆ ಒಳಗಾಗಿ ಹಿನ್ನಡೆಯ ಭೀತಿಗೆ ಸಿಲುಕಿದೆ.

ಮಧ್ಯಪ್ರದೇಶ ಪರ ಸಾರಾಂಶ್ ಜೈನ್ 3 ಮತ್ತು ಆರ್ಯನ್ ಪಾಂಡೆ 2 ವಿಕೆಟ್ ಗಳಿಸಿದರು.

ಮಧ್ಯಪ್ರದೇಶಕ್ಕೆ ಅಯ್ಯರ್ ಆಸರೆ

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮಧ್ಯಪ್ರದೇಶ ತಂಡ ಕೂಡ ಕುಸಿತ ಅನುಭವಿಸಿದರೂ ವೆಂಕಟೇಶ್ ಅಯ್ಯರ್ ಅವರ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು.

ವೆಂಕಟೇಶ್ ಅಯ್ಯರ್ 135 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 87 ರನ್ ಗಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಹಿಮಾಂಶು ಮಂತ್ರಿ (39), ಶುಭಮನ್ ಶರ್ಮ (33), ನಾಯಕ ರಜತ್ ಪಟಿದಾರ್ (30), ಸಾರಾಂಶ್ ಜೈನ್ (32), ಅಕ್ಷತ್ ರಘುವಂಶಿ (22), ಸಾಗರ್ ಸೋಲಂಕಿ (20) ಅಲ್ಪಸ್ವಲ್ಪ ನೆರವು ನೀಡಿದರು.

ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 3, ವಿದ್ವತ್ ಕಾವೇರಪ್ಪ, ವಿಜಯಕುಮಾರ್ ವೈಶಾಕ್ ತಲಾ 2 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments