ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ಬಳ್ಳಾರಿಯಲ್ಲಿರುವ ಮಾಡೆಲ್ ಹೌಸ್ ಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಬಾಲಕ ಸೇರಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಗೆ ಯಾವುದೇ ರಾಜಕೀಯ ನಂಟು ಇಲ್ಲ ಎಂಬುದು ತಿಳಿದು ಬಂದಿದೆ.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೈಟ್ ಎಂಜಿನಿಯರ್ ರಿಜ್ವಾನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬಳ್ಳಾರಿ ಗ್ರಾಮೀಣ ಠಾಣಾ ಪೊಲೀಸರು ಸಿಸಿಟಿವಿ, ಫೋಟೊಗಳನ್ನು ಆಧರಿಸಿ 8 ರಿಂದ 10 ಜನರನ್ನು ಪತ್ತೆ ಹಚ್ಚಿದ್ದಾರೆ. ಅಗ್ನಿ ಅನಾಹುತದಲ್ಲಿ ಮನೆಯಲ್ಲಿದ್ದ 1 ಕೋಟಿ 25 ಲಕ್ಷ ಮೌಲ್ಯದ ಪರಿಕರಗಳು ನಷ್ಟವಾಗಿವೆ.
‘ಅಗ್ನಿ ಅವಘಡದ ಪ್ರಕರಣದಲ್ಲಿ 8 ಮಂದಿಯನ್ನು ವಶಕ್ಕೆ ಪಡೆದಿದ್ದು, ಇದರಲ್ಲಿ ಕೆಲವರು ಅಪ್ರಾಪ್ತರಿದ್ದಾರೆ ಎಂದು ಶನಿವಾರ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್ ಹರ್ಷ ತಿಳಿಸಿದ್ದಾರೆ.
ಬಂಧಿತರ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಬಂಧಿತರಿಗೆ ಯಾವುದೇ ರಾಜಕೀಯ ನಂಟು ಇಲ್ಲ. ಈ ಮನೆಯ ಪರಿಚಯ ಹೊಂದಿದ್ದು, ಸಿಗರೇಟ್ ಹಚ್ಚಿಕೊಳ್ಳುವಾಗ ಆಕಸ್ಮಿಕವಾಗಿ ಅಂಟಿದ ಬೆಂಕಿಯಿಂದ ಅನಾಹುತ ಸಂಭವಿಸಿದೆ ಎಂದು ಅವರು ವಿವರಿಸಿದರು.
ಘಟನೆ ಸಂಬಂಧ 8 ಜನರನ್ನು ವಶಕ್ಕೆ ಪಡೆದಿದ್ದೇವೆ. ಅವರಲ್ಲಿ 6 ಮಂದಿ ಅಪ್ರಾಪ್ತರು ಹಾಗೂ ಇಬ್ಬರು ವಯಸ್ಕರಿದ್ದಾರೆ. ಮನೆಯೊಳಗೆ ಆರೋಪಿಗಳು ರಿಲ್ಸ್, ಪೋಟೋ ಶೂಟ್ ಮಾಡಿಕೊಂಡಿದ್ದಾರೆ. ಬಂಧಿತರ ಮೊಬೈಲ್ ಪರಿಶೀಲಿಸಿದಾಗ ಪೋಟೋ ಶೂಟ್‌ಗಾಗಿ ಮಾಡೆಲ್ ಹೌಸ್ನ ಮೊದಲ ಮಹಡಿಗೆ ಹೋಗಿದ್ದಾರೆ. ಸಿಗರೇಟ್ ವಿಚಾರವಾಗಿ ಬೆಂಕಿ ತಾಗಿರುವ ಶಂಕೆ ಇದೆ ಎಂದು ಅವರು ಹೇಳಿದರು.
ಆರೋಪಿತರಲ್ಲಿ ಇಬ್ಬರು ಮುಂಬೈಯಿಂದ ಬಂದವರು. ಯಾರಿಗೂ ರಾಜಕೀಯ ಹಿನ್ನೆಲೆ ಇಲ್ಲ. ಹೆಚ್ಚಿನ ಪರಿಶೀಲನೆ ಮಾಡಲಾಗುವುದು. ಇದು ದುರುದ್ದೇಶದಿಂದ ಮಾಡಿದ ಕೃತ್ಯ ಅಲ್ಲ. ಬದಲಿಗೆ ಆಕಸ್ಮಿಕವಾಗಿ ನಡೆದ ಘಟನೆ ಎಂದು ಮೇಲ್ಮೋಟಕ್ಕೆ ಕಂಡು ಬರುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಿದ್ದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ನಮ್ಮ ತಾಯಿಯ ಹೆಸರಲ್ಲಿ ಲೇಔಟ್ ಮಾಡಿದ್ದೆವು. ಇಲ್ಲಿ ಜನರಿಗೆ ತೋರಿಸುವುದಕ್ಕಾಗಿ ಮಾಡೆಲ್ ಹೌಸ್ ಕಟ್ಟಿಸಿದ್ದೆವು. ಈ ಮನೆಗೆ 15 ದಿನಗಳ ಹಿಂದೆ ಬ್ಯಾನರ್ ವಿಷಯದಲ್ಲಿ ನಡೆದ ಗಲಾಟೆ ವೇಳೆ ಇದ್ದ ವ್ಯಕ್ತಿಗಳು ಡಿಸೇಲ್, ಪೆಟ್ರೋಲ್ ಹಾಕಿ 10-15 ಜನರು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆಯಲ್ಲಿನ ಎಲ್ಲ ಪಿಠೋಪಕರಣಗಳು ಸುಟ್ಟು ಹೋಗಿವೆ. ಎಲ್ಲ ಗ್ಲಾಸ್ ಪುಡಿಪುಡಿಯಾಗಿವೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ’ ಎಂದು ಆರೋಪಿಸಿದ್ದರು.



