Saturday, June 27, 2026
Google search engine
Homeಕ್ರೀಡೆWPL 2026 FINAL: 2ನೇ ಪ್ರಶಸ್ತಿ ಮೇಲೆ ಆರ್‌ ಸಿಬಿ ಕಣ್ಣು, ಡೆಲ್ಲಿಗೆ ಮೊದಲ ಕನಸು!

WPL 2026 FINAL: 2ನೇ ಪ್ರಶಸ್ತಿ ಮೇಲೆ ಆರ್‌ ಸಿಬಿ ಕಣ್ಣು, ಡೆಲ್ಲಿಗೆ ಮೊದಲ ಕನಸು!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಗುರುವಾರ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯವ ಡಬ್ಲೂಪಿಎಲ್‌ ಟಿ-20 ಟೂರ್ನಿಯ ಫೈನಲ್‌ ನಲ್ಲಿ ಮುಖಾಮುಖಿ ಆಗಲಿವೆ.

೨೦೨೪ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದ ಸ್ಮೃತಿ ಮಂದಾನ ನೇತೃತ್ವದ ಆರ್‌ ಸಿಬಿ ತಂಡ ಈ ಬಾರಿ ಎರಡನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರೆ, ನಾಲ್ಕು ಬಾರಿ ಫೈನಲ್‌ ಪ್ರವೇಶಿಸಿದ್ದರೂ ಒಂದೂ ಬಾರಿಯೂ ಪ್ರಶಸ್ತಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್‌ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

2024ರ ಫೈನಲ್‌ ನಂತರ ಎರಡೂ ತಂಡಗಳು ಮತ್ತೊಮ್ಮೆ ಫೈನಲ್‌ ನಲ್ಲಿ ಮುಖಾಮುಖಿ ಆಗಲಿವೆ. ಆರ್‌ಸಿಬಿ ಈ ಪಂದ್ಯದಲ್ಲಿ ಡೆಲ್ಲಿ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಹಾಗಾಗಿ ಆರ್‌ ಸಿಬಿ ಮತ್ತೊಮ್ಮೆ ಗೆದ್ದು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದರೆ, ಡೆಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಂಡು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದೆ.

ಪ್ರಸಕ್ತ ಋತುವಿನಲ್ಲಿ ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಡಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಮುಖಾಮುಖಿ ದಾಖಲೆ: 2026ರ WPL ಫೈನಲ್‌ಗೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಒಟ್ಟು ಒಂಬತ್ತು ಪಂದ್ಯಗಳು ನಡೆದಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಮೂರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಪ್ರಸಕ್ತ ಋತುವಿನ ಲೀಗ್ ಹಂತದಲ್ಲಿ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಮೊದಲ ಪಂದ್ಯವನ್ನು ಆರ್‌ಸಿಬಿ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ: ಏತನ್ಮಧ್ಯೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದೆ. 2024ರಲ್ಲಿ ಆರ್​ಸಿಬಿ ಮಹಿಳಾ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದ್ದರೇ, 2025ರಲ್ಲಿ ಪುರುಷರ ತಂಡ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಇಂದಿನ ಪಂದ್ಯದಲ್ಲಿ ಮಹಿಳಾ ತಂಡ ಟ್ರೋಫಿ ಗೆದ್ದರೇ ಸತತ ಮೂರನೇ ಬಾರಿಗೆ ಬೆಂಗಳೂರು ಫ್ರಾಂಚೈಸಿ ಚಾಂಪಿಯನ್ ಆಗಲಿದೆ.

ಪಿಚ್​ ವರದಿ: ವಡೋದರಾದ ಕೋಟಂಬಿ ಕ್ರೀಡಾಂಗಣದ ಪಿಚ್ ಋತುವಿನ ಆರಂಭದಲ್ಲಿ ನಿಧಾನವಾಗಿತ್ತು, ರನ್ ಗಳಿಸಲು ಕಷ್ಟವಾಗುತ್ತಿತ್ತು ಇದು ಕಡಿಮೆ ಸ್ಕೋರಿಂಗ್ ಪಂದ್ಯಗಳಿಗೆ ಕಾರಣವಾಯಿತು. ಆದಾಗ್ಯೂ, ಕಳೆದ ಕೆಲವು ಪಂದ್ಯಗಳಿಂದ ಪಿಚ್ ಬದಲಾಗಿದ್ದು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲವಾಗಿದೆ.

ಪ್ರಸ್ತುತ ಇಲ್ಲಿ ರನ್‌ಗಳು ಸುಲಭವಾಗಿ ಗಳಿಸಲ್ಪಡುತ್ತಿದ್ದು ಮತ್ತು ಚೇಸಿಂಗ್‌ ಸಹ ಸುಲಭವಾಗುತ್ತಿವೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 150-160ರ ಆಸುಪಾಸಿನಲ್ಲಿದ್ದು ಸ್ಪಿನ್ನರ್‌ಗಳಿಗೆ ಸಹಾಯಕವಾಗುತ್ತದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವು ಸಾಧ್ಯತೆ ಹೆಚ್ಚು.

ಆರೆಂಜ್ ಕ್ಯಾಪ್ ಸನಿಹದಲ್ಲಿ ಮಂಧಾನ: ಆರ್‌ಸಿಬಿ ನಾಯಕಿ ಸ್ಮೃತಿ ಈ ಋತುವಿನಲ್ಲಿ ಎಂಟು ಪಂದ್ಯಗಳಲ್ಲಿ 48.33ರ ಸರಾಸರಿಯಲ್ಲಿ 290ರನ್ ಗಳಿಸಿ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ 342 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸ್ಮೃತಿ ಅವರನ್ನು ಹಿಂದಿಕ್ಕಲು ಫೈನಲ್​ ಪಂದ್ಯದಲ್ಲಿ ಇನ್ನೂ 53ರನ್ ಗಳಿಸಬೇಕಾಗಿದೆ.ಪ್ರಸ್ತುತ ಸ್ಮೃತಿ ಆರ್‌ಸಿಬಿಯ ಗರಿಷ್ಠ ಸ್ಕೋರರ್ ಆಗಿದ್ದಾರೆ. ಬೌಲಿಂಗ್​ನಲ್ಲಿ ನಾಡಿನ್ ಡಿ ಕ್ಲರ್ಕ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಪರ್ಪಲ್ ಕ್ಯಾಪ್ ಮೇಲೆ ನಂದನಿ ಕಣ್ಣು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ನಂದನಿ ಶರ್ಮಾ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗುಜರಾತ್ ಜೈಂಟ್ಸ್‌ನ ಸೋಫಿ ಡಿವೈನ್ 17 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂದಿನಿ ಪ್ರಸ್ತುತ 16 ವಿಕೆಟ್‌ಗಳನ್ನು ಪಡೆದಿದ್ದು ಮತ್ತು ಮೊದಲ ಸ್ಥಾನವನ್ನು ತಲುಪಲು ಕೇವಲ ಎರಡು ವಿಕೆಟ್‌ಗಳ ಅಗತ್ಯವಿದೆ. ನಂದನಿ ಡೆಲ್ಲಿ ತಂಡದ ಪರ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಆಗಿದ್ದಾರೆ. ಬ್ಯಾಟಿಂಗ್‌ನಲ್ಲಿ, ಲಿಜೆಲ್ಲೆ ಲೀ ಒಂಬತ್ತು ಪಂದ್ಯಗಳಲ್ಲಿ 283 ರನ್ ಗಳಿಸಿದ್ದಾರೆ.

ನೇರ ಪ್ರಸಾರ ಮಾಹಿತಿ: ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ಸಂಭಾವ್ಯ ತಂಡಗಳು – ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ದಯಾಲನ್ ಹೇಮಲತಾ, ನಡಿನ್ ಡಿ ಕ್ಲರ್ಕ್, ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯಕ್, ಲಿನ್ಸೆ ಸ್ಮಿತ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ, ರಾಧಾ ಯಾದವ್ ಮತ್ತು ಲಾರೆನ್ ಬೆಲ್.

ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರಾಡ್ರಿಗಸ್ (ನಾಯಕ), ಶಫಾಲಿ ವರ್ಮಾ, ಲಿಜೆಲ್ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಮರಿಜಾನ್ನೆ ಕಪ್, ನಿಕಿ ಪ್ರಸಾದ್, ಅಲನಾ ಕಿಂಗ್, ಮಿನ್ನು ಮಣಿ, ಸ್ನೇಹ ರಾಣಾ, ಶ್ರೀ ಚರಣಿ, ನಂದನಿ ಶರ್ಮಾ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ ಆರಂಭ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments