ಮಹಾರಾಶಿವರಾತ್ರಿ ಹಿನ್ನೆಲೆಯಲ್ಲಿ ಚಿರತೆ ದಾಳಿ ನಡೆಯುತ್ತಿರುವ ಮಲೆ ಮಾದೇಶ್ವರ ಬೆಟ್ಟದಲ್ಲಿ ದ್ವಿಚಕ್ರ ಮತ್ತು ತ್ರಿವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಚಾಮರಾಜನರ ಜಿಲ್ಲಾಡಳಿತ ಆದೇಶಿಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೈಕ್ ಮತ್ತು ತ್ರಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಭಕ್ತರು ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಪಾದಯಾತ್ರೆ ಮಾಡಲು ಸಮಯ ನಿಗದಿಪಡಿಸಲಾಗಿದೆ.
ಫೆಬ್ರವರಿ 13 ರಿಂದ 18ರವರೆಗೆ ಬೈಕ ಹಾಗೂ ತ್ರಿಚಕ್ರ ವಾಹನಗಳಿಗೆ ಪ್ರವೇಶ ಇಲ್ಲ. ಮಹಾಶಿವರಾತ್ರಿ ಹಿನ್ನೆಲೆ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ಕಿರಿದಾದ ರಸ್ತೆ ಹಾಗೂ ಕಾಡು ರಸ್ತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಿದೆ. ರಾಜ್ಯದ ವಿವಿಧಡೆ ಹಾಗೂ ಹೊರ ರಾಜ್ಯದಿಂದಲೂ ಕೂಡ ಭಕ್ತರು ಆಗಮಿಸುತ್ತಾರೆ.ಹಾಗಾಗಿ ತಾತ್ಕಾಲಿಕವಾಗಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಇದೇ ವೇಳೆ ಚಿರತೆ ದಾಳಿಯ ಮೇಲೆ ನಿಗಾ ವಹಿಸಲು ಅರಣ್ಯ ಇಲಾಖೆ ನೇತೃತ್ವದಲ್ಲಿ 8 ತಂಡಗಳನ್ನು ರಚಿಸಲಾಗಿದೆ. ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ವೈದ್ಯಾಧಿಕಾರಿಗಳು, ಪೊಲೀಸರು ಸೇರಿದಂತೆ 8 ತಂಡಗಳು ಕಾರ್ಯ ನಿರ್ವಹಿಸಲಿದೆ.
ಆರ್ ಎಫ್ ಓ ನೇತೃತ್ವದಲ್ಲಿ ಈ 8 ತಂಡಗಳು ಡ್ರೋಣ್ ಮೂಲಕ ಚಿರತೆ ಹಾಗೂ ಭಕ್ತರ ಚಲನವಲನಗಳ ಮೇಲೆ ನಿಗಾ ವಹಿಸಲಿದ್ದಾರೆ. ತುರ್ತು ಪರಿಸ್ಥಿತಿ ಅಥವಾ ಚಿರತೆ ದಾಳಿಯಂತಹ ಘಟನೆಗಳ ವೇಳೆ ತಕ್ಷಣ ಸ್ಪಂದಿಸಿ ಯಾವುದೇ ಅನಾಹುತ ಆಗದಂತೆ ತಡೆಯಲು ಕಟ್ಟೆಚ್ಚರ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.



