ಟೆಹರಾನ್/ಕೊಲಬೊ: ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿದ್ದ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಣ ಯುದ್ಧದ 5ನೇ ದಿನ ಶ್ರೀಲಂಕಾ ಹಾಗೂ ಟರ್ಕಿಗೆ ವ್ಯಾಪಿಸಿದೆ. ನಾಯಕ ಖಮೇನಿ ಕಳೆದುಕೊಂಡರೂ ಇರಾನ್ ದಾಳಿ ಕುಂದುವ ಲಕ್ಷಣಗಳು ಕಾಣುತ್ತಿಲ್ಲ. ಬದಲಾಗಿ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತಿದೆ.
ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿದರೆ, ಇತ್ತ ಟರ್ಕಿಯ ಮೇಲೆ ಇರಾನ್ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯನ್ನು ನ್ಯಾಟೊ ವಿಫಲಗೊಳಿಸಿದೆ.
ಇರಾನ್ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಸೌದಿಯ ಅರ್ಮಾಕೊ ರಾಸ್ ಟನುರಾ ತೈಲ ಘಟಕದ ಮೇಲೆ ಎರಡನೇ ಬಾರಿ ದಾಳಿ ಮಾಡಿದೆ. ಟೆಹರಾನ್ ಮೇಲೆ ಹಾರಾಡುತ್ತಿದ್ದ ಅಮೆರಿಕದ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್ ಬೆಂಬಲಿತ ಹೌತಿ ಪಡೆಗಳು ಇಸ್ರೇಲ್ ನ ವಾಯುನಲೆ ಹಾಗೂ ಕೈಗಾರಿಕಾ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ.
ಮತ್ತೊಂದೆಡೆ ಇರಾನ್ ನ ಶಸ್ತ್ರಾಗಾರ ತಯಾರಿಕಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡಿ, ಕ್ಷಿಪಣಿ ತಯಾರಿಕಾ ಘಟಕ ಧ್ವಂಸ ಮಾಡಿರುವುದಾಗಿ ಹೇಳಿಕೊಂಡಿದೆ. ಕತಾರ್ ನಲ್ಲಿ ಸಂಭವಿಸಿದ ಎಡವಟ್ಟಿನಲ್ಲಿ 3 ಎಫ್ –ಯುದ್ಧ ವಿಮಾನ ಪತನಗೊಂಡ ಘಟನೆಯಲ್ಲಿ 6 ಯೋಧರು ಮೃತಪಟ್ಟಿರುವುದನ್ನು ಅಮೆರಿಕ ದೃಢಪಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇರಾನ್ ನಲ್ಲಿ ಸಾವಿನ ಸಂಖ್ಯೆ 1045ಕ್ಕೆ ಏರಿಕೆಯಾಗಿದೆ.
ಶ್ರೀಲಂಕಾದಲ್ಲಿ ಇರಾನ್ ನೌಕೆ ಪತನ
ಬುಧವಾರ ಶ್ರೀಲಂಕಾದ ಬಳಿ ಇರಾನ್ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ ನಡೆಸಿದೆ. ಈ ದಾಳಿ ನಡೆಸಿದ್ದು, ಇರಾನ್ ಹಡಗಿನಲ್ಲಿದ್ದ 101 ಮಂದಿ ನಾಪತ್ತೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ. 30 ಮಂದಿಯನ್ನು ರಕ್ಷಿಸಲಾಗಿದೆ.
ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಈ ವಿಷಯ ದೃಢಪಡಿಸಿದ್ದು, ಐಆರ್ ಐಎಸ್ ಡೆನಾ ಹೆಸರಿನ ಹಡಗಿನಲ್ಲಿ 180 ಮಂದಿ ಇದ್ದರು ಎಂದು ತಿಳಿದು ಬಂದಿದ್ದು ಕೂಡಲೇ ರಕ್ಷಣೆಗೆ ಹಡಗು ಹಾಗೂ ಹೆಲಿಕಾಪ್ಟರ್ ಗಳನ್ನು ರವಾನಿಸಲಾಗಿದೆ ಎಂದು ತಿಳಿಸಿದೆ.
ದಾಳಿಯಲ್ಲಿ ಹಡಗು ಮುಳುಗಡೆ ಆಗಿದ್ದು, 30 ಮಂದಿಯನ್ನು ರಕ್ಷಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, 7 ಮಂದಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಯಾವ ದೇಶದ ಹಡಗು ದಾಳಿ ಮಾಡಿದೆ. ದಾಳಿಗೆ ಒಳಗಾದ ಹಡಗು ಯಾವುದು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಶ್ರೀಲಂಕಾ ತಿಳಿಸಿದೆ.
ಹುರ್ಮಾಜ್ ಮೇಲೆ ಇರಾನ್ ಪೂರ್ಣ ಹಿಡಿತ
ಯುದ್ಧ 5ನೇ ದಿನಕ್ಕೆ ಕಾಲಿಟ್ಟರೂ ಇರಾನ್ ದುರ್ಬಲಗೊಳ್ಳುವ ಬದಲು ಮತ್ತಷ್ಟು ಆಕ್ರಮಣಕಾರಿ ಆಗುತ್ತಿರುವುದು ಅಮೆರಿಕ- ಇಸ್ರೇಲ್ ಗೆ ತಲೆನೋವಾಗಿದೆ. ಹರ್ಮಾಜ್ ಜಲಸಂಧಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ಇರಾನ್ ಹೇಳಿಕೊಂಡಿದ್ದು, ಚೀನಾ ಹಡಗುಗಳಿಗೆ ಮಾತ್ರ ವಿನಾಯಿತಿ ನೀಡುವುದಾಗಿ ಘೋಷಿಸಿದೆ.
ಇದರಿಂದ ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳು ತೈಲ ಕೊರತೆ ಎದುರಿಸುವ ಭೀತಿಗೆ ಸಿಲುಕಿದೆ.



